Thursday, April 9, 2009

ಮಾಧ್ಯಮ ಮಿತ್ರರ ಕೋಳಿ ಜಗಳ ಭಾಗ ೨: ರವೀಂದ್ರ ರೇಷ್ಮೆ vs ವಿಶ್ವೇಶ್ವರ ಭಟ್


ವಿ.ಕ.ಭಟ್ಟರ ಮೇಲೆ ರವೀಂದ್ರ ರೇಷ್ಮೆ ಹೆಗಲ ಮೇಲಿಂದ ರವಿಕೃಷ್ಣಾ ರೆಡ್ಡಿಯ ಗುಂಡು!


ಕಳೆದ ವಾರ "ಮಾಧ್ಯಮ ಮಿತ್ರರ ಕೋಳಿ ಜಗಳ ನೋಡು ಬಾರಾ:ವಿಶ್ವೇಶ್ವರ ಭಟ್ vs ರವಿಕೃಷ್ಣಾ ರೆಡ್ಡಿ" ಕದನದ ಭಾಗ ೨ ಎಂದೇ ಹೇಳಿ ಬೇಕಾದರೆ, ಈ ವಾರ ವಿಕ್ರಾಂತ ಕರ್ನಾಟಕದ "ಗೌರವ ಸಂಪಾದಕ" ರವೀಂದ್ರ ರೇಷ್ಮೆಯವರು ನೇರವಾಗಿ ವಿಜಯ ಕರ್ನಾಟಕದ ಭಟ್ಟರ ಮೇಲೆ ಹರಿಹಾಯ್ದಿದ್ದಾರೆ. ಅಂತೂ ಸುದ್ದಿ ರಿಪೋರ್ಟ್ ಮಾಡಬೇಕಾದ ಪತ್ರಕರ್ತರೇ ತಮ್ಮೊಳಗೆ ಜಗಳ ಮಾಡಿಕೊಂಡು ತಾವೇ ಸುದ್ದಿಯಾಗುತ್ತಿದ್ದಾರೆ.

ಇದೆಲ್ಲಾ ಶುರುವಾದದ್ದು ರವಿಕೃಷ್ಣಾ ರೆಡ್ಡಿ, ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ಟರನ್ನು "ಅನಂತ ಕುಮಾರ ನಿಷ್ಠ ಭಟ್" ಎಂದು ಬಣ್ಣಿಸುವುದರಿಂದ. ಭಟ್ಟರು ಸುಮ್ಮನೆ ಬಿಡುತ್ತಾರೆಯೇ? ಸುದ್ದಿ ಮನೆಯ ಪ್ರೈವೆಸಿಗೆ ಮಣ್ಣು ಹಾಕಿ, ಹಿಂದಿನ ಚುನಾವಣೆಯಲ್ಲಿ ರವಿಕೃಷ್ಣಾ ರೆಡ್ಡಿ ತಮ್ಮ ಕಚೇರಿಗೆ ಬಂದದ್ದು, ಸಪೋರ್ಟ್ ಕೇಳಿದ್ದು, ತಾನು ಉಪದೇಶ ಮಾಡಿ ಹಿಂದೆ ನಕ್ಕಿದ್ದು ಎಲ್ಲವನ್ನೂ ಬಣ್ಣಿಸಿ, ರವಿಕೃಷ್ಣಾ ರೆಡ್ಡಿ "ಲೂಸು ಕೇಸ್" ಅಂತಾ ತಮ್ಮ ಭಾನುವಾರದ ಅಂಕಣದಲ್ಲಿ ಬರೆದುಬಿಟ್ಟರು.

ಅದಕ್ಕೆ ಉತ್ತರವಾಗಿ ರವಿಕೃಷ್ಣಾ ರೆಡ್ಡಿ ತನ್ನ ಪತ್ರಿಕೆಯ "ಗೌರವ ಸಂಪಾದಕ" (ಅಂದರೆ ಬಾಡಿಗೆ ಸಂಪಾದಕ ಅಥವಾ ಹೊರಗುತ್ತಿಗೆಯ ಸಂಪಾದಕವೆನ್ನೋಣವೇ?) ರವೀಂದ್ರ ರೇಷ್ಮೆಯ ಹೆಗಲ ಮೇಲೆ ಕುಳಿತು ಪ್ರತ್ಯುತ್ತರ ನೀಡಿದ್ದಾರೆ.

ರೇಷ್ಮೆಯವರೂ ಪತ್ರಿಕೋದ್ಯಮದ ಎಲ್ಲಾ ಕಟ್ಟುಪಾಡುಗಳನ್ನು ಅತ್ತ ಬದಿಗಿಟ್ಟು (ಹೇಗೂ "ಗೌರವ ಸಂಪಾದಕ"ರಲ್ಲಾ!), ತಮ್ಮ ಮತ್ತು ವಿಶ್ವೇಶ್ವರ ಭಟ್ಟರ ನಡುವೆ ನಡೆದ ಖಾಸಗಿ ದೂರವಾಣಿ ಸಂಭಾಷಣೆಯನ್ನೇ ಈ ವಾರದ ಸಂಪಾದಕೀಯ ಮಾಡಿ ಬಿಟ್ಟಿದ್ದಾರೆ. ತನ್ಮೂಲಕ ತನ್ನ ಮಾಲಿಕ ರವಿಕೃಷ್ಣಾ ರೆಡ್ಡಿ ವಿರುದ್ಧ ಬರೆದ ವಿಶ್ವೇಶ್ವರ ಭಟ್ಟರ ವಿರುದ್ಧ ಕಿಡಿಕಾರಿ ರವಿಕೃಷ್ಣಾ ರೆಡ್ಡಿಯ ಋಣ ತೀರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಭರ್ಜರಿ ೨೦೦ ಮತ ಗಳಿಸಿ ಠೇವಣಿ ಕಳೆದುಕೊಂಡ ರವಿಕೃಷ್ಣಾ ರೆಡ್ಡಿಯನ್ನು "ಯುವ ಕನಸುಗಾರ", "ಪ್ರಾಮಾಣಿಕ ಹೋರಾಟಗಾರ"ಯೆಂದೆಲ್ಲಾ ತನ್ನ ಧಣಿಯನ್ನು ಸ್ವಲ್ಪ ಅತಿಯಾಗಿಯೇ ಹೊಗಳಿದ್ದಾರೆ.

ಒಟ್ಟಾರೆ ಹೇಳುವುದಾದರೆ, ಕರ್ನಾಟಕ ಪತ್ರಿಕೋದ್ಯಮದ ಘಟಾನುಘಟಿಗಳು ಈ ಪರಿ "ಇಗೋ" ಪ್ರದರ್ಶನ ಮಾಡುವುದನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಅಂತೂ ಇಬ್ಬರ ಜಗಳದಲ್ಲಿ ಕರ್ನಾಟಕದ ಸುದ್ದಿ ಮನೆಗಳಲ್ಲಿ ಏನು ನಡೆಯುತ್ತದೆ, ಜಾತೀಯತೆ, ಲಾಬಿಗಳು ಹೇಗೆ ಬೀಡು ಬಿಟ್ಟಿವೆ ಎಂಬುದೆಲ್ಲಾ ಹೊರಬರುತ್ತಿದೆ.

ಎಲ್ಲಾ ಬದಿಗಿಟ್ಟು ನೋಡಿದರೆ ಈ ಘಟಾನುಘಟಿಗಳ ನಡುವೆ ವ್ಯತ್ಯಾಸವೇನೂ ಇಲ್ಲ. ತತ್ವ ನಿಷ್ಠೆ, ಎಡ ಬಲ ಸಿದ್ಧಾಂತಗಳೆಲ್ಲಾ ಕೇವಲ ತೋರಿಕೆಗಾಗಿ ಮಾತ್ರ.

ಅತ್ತ ರವೀಂದ್ರ ರೇಷ್ಮೆ ಲಂಕೇಶರ ಹೆಸರಲ್ಲಿ, ತನಿಖಾ ಪತ್ರಿಕೋದ್ಯಮದ ಹೆಸರಲ್ಲಿ ಏನೆಲ್ಲಾ ಮಾಡಿದ್ದಾರೆ, ತಮಗೆ ಎಷ್ಟು ಮಾಡಿಕೊಂಡಿದ್ದಾರೆಯೆಂದು ತಿಳಿಯಬೇಕಾದರೆ ಹಿಂದಿನ "ಲಂಕೇಶ್ ಪತ್ರಿಕೆ"ಯ ಮಾಜಿ ಕೆಲಸಗಾರರನ್ನು ಕೇಳಿ ನೋಡಿ. ವಿಧಾನಸೌಧದ ಒಂದು ಕಚೇರಿಯಿಂದ ದಾಖಲೆ ಪತ್ರ ತರಿಸಿಕೊಳ್ಳುವುದು, ಅದರ ಪ್ರತಿಯನ್ನು ಮಂತ್ರಿಗಳಿಗೋ, ಇತರ ಅಧಿಕಾರಿಗಳಿಗೋ ಕಳಿಸಿ ಬ್ಲ್ಯಾಕ್ ಮೇಲ್ ಮಾಡುವುದು, ಪತ್ರಿಕಾ ವರದಿ ಪ್ರಕಟಿಸದಿರಲು ಎರಡೂ ಕಡೆಯಿಂದ ಇಕ್ಕಿಕೊಳ್ಳುವುದು ರೇಷ್ಮೆಯವರ "ತನಿಖಾ ಪತ್ರಿಕೋದ್ಯಮ"ದ ಸ್ಟೈಲ್! ಲಂಕೇಶರ ಹೋದ ಮೇಲಂತೂ ಜಿಲ್ಲಾ ಮಟ್ಟ, ತಾಲೂಕು ಹೋಬಳಿ ಮಟ್ಟದಲ್ಲೂ ರೇಷ್ಮೆಯವರ "ತನಿಖಾ ಪತ್ರಿಕೋದ್ಯಮ" ನಡೆದದ್ದೇ ನಡೆದದ್ದು. ಸಾಮಾಜಿಕ ನ್ಯಾಯವೆಂದೆಲ್ಲಾ ಬೋರು ಹೊಡೆಸುವ ರೇಷ್ಮೆ ಅದನ್ನೂ ಒಂಥರಾ ಮಾಡಿದ್ದಾರೆ - ತಮ್ಮ ಪತ್ರಿಕಾವರದಿಗಾರರೆಲ್ಲಾ ಅಡ್ಡೆ ಪಡ್ಡೆಯಂತಿದ್ದವರು ರೇಷ್ಮೆಯವರ "ತನಿಖಾ ಪತ್ರಿಕೋದ್ಯಮದ" ತರಬೇತಿಯಿಂದಾಗಿ ಪ್ರೊಫೆಷನಲ್ ಹಫ್ತಾ ಕಲೆಕ್ಟರುಗಳೂ ನಾಚುವಂತೆ ಬಂಗಲೆ ಕಾರುಗಳನ್ನು ಕೊಂಡಿದ್ದಾರೆ.

ಕಾಲೇಜಿನಲ್ಲಿ ಪ್ರೊಫೆಸರ ಆದರೂ ಸರಿಯಾಗಿ ಪಾಠ ಮಾಡುವ ಬದಲು ದಿನವಿಡೀ ಡೀಲ್ ಕುದರಿಸುವ ರವೀಂದ್ರ ರೇಷ್ಮೆ,, ಕಳೆದ ಕೆಲ ದಶಕಗಳಿಂದ "ಹವ್ಯಾಸೀ ಪತ್ರಕರ್ತ", "ಗೌರವ ಸಂಪಾದಕ", "ತನಿಖಾ ಪತ್ರಕರ್ತ"ನೆಂಬ ಸ್ವಘೋಷಿತ ಬಿರುದುಗಳಿಂದ ಹೊರಬಂದಂತಿಲ್ಲ. ಬಿರುದು ಬಾವಲಿ ಹಾಕಿಕೊಳ್ಳಲಿ, ಆದರೆ ಪ್ರತಿವಾರ ಪತ್ರಿಕೆ ಹೊರತರಲು ಯಾಕೆ ಒದ್ದಾಡುತ್ತಿದ್ದಾರೆಂಬುದೇ ಅರ್ಥವಾಗುತ್ತಿಲ್ಲ - ಊರಿಗೆಲ್ಲಾ ಉಪದೇಶ ಮಾಡುವ ಮೊದಲು ತಮ್ಮ ಪತ್ರಿಕೆ ಸರಿಯಾಗಿ ಪ್ರತಿವಾರ ಹೊರತನ್ನಿ ಸ್ವಾಮೀ!

ಅಲ್ಲಾ, ವಿಶ್ವೇಶ್ವರ ಭಟ್ಟರು ಅನಂತಕುಮಾರ್ ಪಿ.ಎ. ಆಗಿದ್ದರೆಂಬುದನ್ನೇ ದೊಡ್ಡ ಅಪರಾಧವೆಂಬಂತೆ ರೇಷ್ಮೆಯವರು ಬಿಂಬಿಸುತ್ತಾರಲ್ಲಾ, ೧೯೮೩ರಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದದ್ದೇ ತನ್ನಿಂದಾಗಿ, ನಜೀರ್ ಸಾಹೇಬರು ಗ್ರಾಮೀಣಾಭಿವೃದ್ಧಿ ಸಚಿವರಾಗಲು ಹೇಳಿದ್ದು ನಾನೇ, ದೇವೇಗೌಡರ ಅಪ್ಪ ಮಕ್ಕಳ ಪಕ್ಷದ ಪ್ರಣಾಳಿಕೆ ಬರೆದದ್ದು ನಾನೇ ಎಂದೆಲ್ಲಾ ಕೊಚ್ಚಿಕೊಳ್ಳುತ್ತಾರೆ. ಪ್ರಾಯಶ: ತಾನು ಮಾತ್ರ ರಾಜಕೀಯ ಮಾಡಬಹುದು (ಹೇಗೂ "ಗೌರವ ಸಂಪಾದಕ"ರಲ್ಲಾ!), ಅದನ್ನೇ ಇನ್ನೊಬ್ಬ ಸಂಪಾದಕ ಭಟ್ಟರು ಮಾಡಿದರೆ ತಪ್ಪೆಂಬುದು ಅವರ ಅಭಿಪ್ರಾಯವೇನೋ.

ಇನ್ನು ವಿಶ್ವೇಶ್ವರ ಭಟ್ಟರ ವಿಷಯಕ್ಕೆ ಬರುವುದಾದರೆ, ತಮ್ಮ ಹಿಂದಿನ ದಿನಗಳಲ್ಲಿ ಒಂದು ಸರಿಯಾದ ಕೆಲಸವಿಲ್ಲದೆ ಅಲೆಯುತ್ತಿದ್ದಾಗ ಅನಂತಕುಮಾರ್ ಸಚಿವನಾದ ಕೂಡಲೇ ಅವರ ಕೃಪೆಯಿಂದ ಡಜನುಗಟ್ಟಳೆ ದೇಶ ವಿದೇಶಗಳನ್ನು ಸರಕಾರಿ ಖರ್ಚಿನಲ್ಲಿ, ತೆರಿಗೆದಾರರ ಖರ್ಚಲ್ಲಿ ಸುತ್ತಿದ್ದಾರೆ. ಹೊಟೇಲ್ ಅಶೋಕಾ ಮಾರಾಟ ಹಗರಣದಲ್ಲಿ ಭಟ್ಟರ ಹೆಸರು ಕೇಳಿ ಬಂದದ್ದು ಸುಳ್ಳೇನಲ್ಲ. ಮತ್ತೆ "ಹುಡ್ಕೋ ಹಗರಣ"ದಲ್ಲೂ ವಿಶ್ವೇಶ್ವರ ಭಟ್ಟರ ಹೆಸರು ಕೇಳಿ ಬಂದಿತ್ತು - ಹುಡ್ಕೋ ಹೆಸರಿನಲ್ಲಿ ಬಾಡಿಗೆ ಪಡೆದುಕೊಂಡಿದ್ದ ಕಾರು ಬಂಗಲೆಗಳು ವಿಶ್ವೇಶ್ವರ ಭಟ್ಟರು ಉಪಯೋಗಿಸುತ್ತಿದ್ದರೆಂದೆಲ್ಲಾ ಬೆಂಗಳೂರಿನ ಕೆಲ ಹಿರಿ ಪತ್ರಕರ್ತರು ಹೇಳುತ್ತಿರುತ್ತಾರೆ. "ಅಕ್ಕ" ಸಮ್ಮೇಳನದ ಹೆಸರಲ್ಲಿ ಪ್ರತಿವರ್ಷ ಅಮೆರಿಕಾ ಸುತ್ತುವ ಭಟ್ಟರು, ರಾಜ್ಯದಲ್ಲೇ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾವುದೋ ಜೂನಿಯರ್ ರಿಪೋರ್ಟರುಗಳನ್ನು ಕಳೆಸಿ ತಮ್ಮ ಸಾಹಿತ್ಯ ಪ್ರೇಮ ಮೆರೆಯುತ್ತಾರೆ.

ಭಟ್ಟರ ಮೇಲಿರುವ ಇನ್ನೊಂದು ದೊಡ್ಡ ಅಪವಾದವೆಂದರೆ, ತಮ್ಮ ಹೆಸರಿನಲ್ಲಿ ಬರುವ ಅಂಕಣಗಳನ್ನು, ಪುಸ್ತಕಗಳನ್ನು ಬೇರೆಯವರ ಕೈಯಲ್ಲಿ ಬರೆಸುತ್ತಾರೆಂದು. ದಿನವಿಡೀ ಬೆಂಗಳೂರಿನಲ್ಲಿ ಅದಾವುದೋ ಉದ್ಘಾಟನೆ, ಬಿಡುಗಡೆ, ಸನ್ಮಾನ, ಸಮಾರಂಭಗಳಲ್ಲೇ ಕಂಡುಬರುವ ವಿಶ್ವೇಶ್ವರ ಭಟ್ಟರಿಗೆ ಓದಲು, ಬರೆಯಲು ಸಮಯವೆಲ್ಲಿ ಸಿಗುತ್ತದೆಯೆಂಬ ಪ್ರಶ್ನೆ ಸಹಜ ತಾನೇ? ಕಾಲೇಜಿನಲ್ಲಿ ಫುಲ್ ಟೈಮ್ ಪ್ರೊಫೆಸರ್ ಆಗಿರುವ ರೇಷ್ಮೆಯವರಿಗೂ "ತನಿಖಾ ಪತ್ರಿಕೋದ್ಯಮ"ಕ್ಕೆ ಪುರುಸೊತ್ತೆಲ್ಲಿಯೆಂದೂ ಕೇಳಬೇಕಾಗುತ್ತದೆ. ದೂರದ ಅಮೆರಿಕದ ಟೆಕ್ಕಿ ರವಿಕೃಷ್ಣಾ ರೆಡ್ಡಿಗೆ ಚುನಾವಣಾ ಸಮಯದಲ್ಲಿ ವಾರಗಟ್ಟಳೆ ಕರ್ನಾಟಕದ ಊರು ಸುತ್ತಲು ಪುರುಸೊತ್ತು ಹೇಗೆ ಸಿಗುತ್ತದೆಯೆಂಬುದೂ ಸೋಜಿಗದ ಸಂಗತಿ.

ಒಳಹೊಕ್ಕು ನೋಡಿದರೆ, ಪತ್ರಕರ್ತರೆಂದೆಲ್ಲಾ ಬೀಗುವ ಈ ರೇಷ್ಮೆ, ರೆಡ್ಡಿ, ಭಟ್ ವಗೈರೆಗಳ ಸೈಡ್ ಬಿಜಿನೆಸ್ಸುಗಳು, "ತನಿಖಾ ವರದಿ" ಹೆಸರಲ್ಲಿ ನಡೆಸುವ ಬ್ಲ್ಯಾಕ್ ಮೈಲ್ ಉದ್ಯಮಗಳು, ಲ್ಯಾಂಡ್ ಮಾಫಿಯಾಗಳ ಪ್ರಾಕ್ಸಿಗಳಂತೆ ವರ್ತಿಸುವ ಪತ್ರಿಕಾ ವರದಿಗಾರರು, ಚುನಾವಣಾ ಸಮಯದಲ್ಲಿ ಎಲ್ಲಿ ಸಿಗುತ್ತದೋ ಅಲ್ಲಿ ಉಂಡುವ ಮಾಧ್ಯಮ ಮಿತ್ರರ ವರ್ತನೆ ನೋಡಿ ವಾಕರಿಕೆ ಬರುತ್ತದೆ. ಅಲ್ಲಾ ಇದ್ದ ಬದ್ದ ರಾಜಕಾರಣಿಗಳ ಬಗ್ಗೆ, ಸಮಾಜದ ಅನಿಷ್ಠಗಳ ಬಗ್ಗೆ ಉಪದೇಶ ಮಾಡುವ ಪತ್ರಕರ್ತರೇ ಹೀಗೆ ಲೇಖನಿಗಳ ಮೂಲಕ ಹೊಡೆದಾಡಿಕೊಂಡರೆ ರಾಜಕಾರಣಿಗಳ ಬಗ್ಗೆ ಉಪದೇಶ ಮಾಡಲು ಇವರಿಗೆ ನೈತಿಕ ಹಕ್ಕೆಲ್ಲಿದೆಯೆಂಬ ಪ್ರಶ್ನೆ ಉದ್ಭವಿಸುತ್ತದೆ.

ಆದರೂ ವಿಶ್ವೇಶ್ವರ ಭಟ್ ಮತ್ತು ರವೀಂದ್ರ ರೇಷ್ಮೆಯಂತಹ ಕನ್ನಡ ಪತ್ರಿಕೋದ್ಯಮದ ಘಟಾನುಘಟಿಗಳು ಶಾಲಾ ಹುಡುಗರಂತೆ ಜಗಳ ಮಾಡುತ್ತಿರುವುದರಿಂದ ಕನ್ನಡ ಪತ್ರಿಕೋದ್ಯಮದ ಒಳಗಿನ ಹುಳುಕಗಳೆಲ್ಲಾ (ಅದೇನೋ ಡಾರ್ಕ್ ಸೀಕ್ರೆಟ್ ಅಂತಾರಲ್ಲಾ) ಹೊರಬರುತ್ತಿರುವುದು ಕನ್ನಡ ಪತ್ರಿಕೋದ್ಯಮದ ದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯೆನ್ನೋಣವೇ?