Sunday, July 19, 2009

ಉಂಡೂ ಹೋದ ಕೊಂಡೂ ಹೋದ ಕರ್ನಾಟಕದ ಭ್ರಷ್ಟ ಪತ್ರಕರ್ತರ ಬಗ್ಗೆ


ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಮಾಧ್ಯಮ ಸಲಹಗಾರರಾಗಿದ್ದ ಧನಂಜಯ ಕುಲಕರ್ಣಿಯವರು ಕರ್ನಾಟಕದ ಮಾಧ್ಯಮ ಲೋಕದ ಇಂದಿನ ಹುಳುಕುಗಳನ್ನು ತೆಗೆದಿಟ್ಟು ಬಹಳ ಗಂಭೀರವಾದ ಆರೋಪ ಮಾಡಿದ್ದಾರೆ. ಮಾಧ್ಯಮ ಮಿತ್ರರು ಹಣ ಕೇಳಿದಾಗ ಕೇಳಿದಷ್ಟು ಚುಪ್ಪೆಂದು ಕೊಟ್ಟು ಈಗ ಚುನಾವಣೆಯಲ್ಲಿ ಸೋತ ಮೇಲೆ ಧನಂಜಯರು ಭಡಭಡಿಸುತ್ತಿದ್ದಾರೆ ಯಾಕೆಂದು ಗೊತ್ತಾಗುತ್ತಿಲ್ಲ. ತಾನು ತಪ್ಪು ಮಾಡಿರದಿದ್ದರೆ ಹಣ ಯಾಕೆ ಕೊಟ್ರಿ ಸ್ವಾಮೀ? ತಮ್ಮ ಹುಳುಕುಗಳನ್ನು ಆಗ ಮುಚ್ಚಿಕೊಳ್ಳಲು ತಮಗೆ ಇದೇ ಮಾಧ್ಯಮ ಮಿತ್ರರು ಬೇಕಾದರು, ತಮ್ಮ ಇಚ್ಚೆಯಂತ್ ಕೆಲಸವನ್ನೂ ಮಾಡಿದರು. ಆದರೂ ಧನಂಜಯರು ಎತ್ತಿರುವ ಪ್ರಶ್ನೆಗಳು ಬಹಳ ಮುಖ್ಯವೆಂದೆನಿಸುತ್ತದೆ.


ಧನಂಜಯರು ಮೂರು ಉದಾಹರಣೆಗಳ ಸಹಿತ ಮಾಡಿರುವ ಆರೋಪಗಳನ್ನು ನಂಬದಿರಲು ಸಾಧ್ಯವೇ ಇಲ್ಲ - ಬಹಳ ಸ್ಪೆಸಿಫಿಕ್ ಆದ ಆರೋಪ ಮಾಡಿದ್ದಾರೆ.

ಧನಂಜಯರ ಬ್ಲಾಗನ್ನು ಇಲ್ಲಿ ನೋಡಿ: http://kannadajournalists.ning.com/profiles/blogs/2792947:BlogPost:19201

ಕಮೆಂಟುಗಳಲ್ಲೂ ಧನಂಜಯರು ಇನ್ನಷ್ಟು ಉದಾಹರಣೆಗಳ ಮೂಲಕ ಇಂದಿನ ಪತ್ರಿಕಾಲೋಕದ ಹುಳುಕುಗಳನ್ನು ಎಳೀಳೆಯಾಗಿ ತೆರೆದಿಟ್ಟಿದ್ದಾರೆ.

ಚುನಾವಣಾ ಸಮಯದಲ್ಲಿ ಲಕ್ಷಗಟ್ಟಳೆ ಮಾಡಿಕೊಂಡಿರುವ, ಹೊಸ ಕಾರು ಬಂಗಲೆ ಮಾಡಿಕೊಂಡಿರುವ ಪತ್ರಕರ್ತರು ಬೆಂಗಳೂರಲ್ಲಿ ಡಜನುಗಟ್ಟಳೆ ಸಿಗುತ್ತಾರೆ. ಆದರೆ ಈ ರೀತಿಯ ಅನೈತಿಕ ಪತ್ರಿಕೋದ್ಯಮ ಜಿಲ್ಲಾ ತಾಲೂಕು ಮಟ್ಟದಲ್ಲೂ ನಡೆಯುತ್ತಿದೆಯೆಂದರೆ ನಮ್ಮ ಮಾಧ್ಯಮ ಲೋಕ ಹೇಗೆ ಗಬ್ಬೆದ್ದು ಹೋಗಿದೆಯೆಂದು ತಿಳಿದು ಬರುತ್ತದೆ.

ಪತ್ರಿಕೋದ್ಯಮವೆಂದರೆ ಯಾವುದೇ ಅರ್ಹತೆಯಿಲ್ಲದೆ ಸುಲಭವಾಗಿ ಮೇಯುವ ಕ್ಷೇತ್ರವೆಂದು ಸತ್ಯ ತಾನೇ? ಅತ್ತ ಶಾಲೆಗಳಲ್ಲಿ ಗುಡಿಸುವ ಕೆಲಸಕ್ಕೆ, ಕ್ಲರ್ಕ್ ಕೆಲಸಕ್ಕೆ, ಪೊಲೀಸ್ ಪೇದೆಯಾಗಲು ೭ನೇ ಕ್ಲಾಸೋ, ಎಸ್.ಎಸ್.ಎಲ್.ಸಿ.ಪಾಸಾಗಿರಬೇಕೆಂಬ ಕನಿಷ್ಠ ಅರ್ಹತೆ ಬೇಕು - ಆದರೆ ಎಂತಹ ವಿಪರ್ಯಾಸ ನೋಡಿ - ಇಂದು ಪತ್ರಿಕೋದ್ಯಮಿಯೆಂದೆನಿಸಿಕೊಳ್ಳಲು ಯಾವುದೇ ಅರ್ಹತೆ ಬೇಡ!

ನಾನು ಹಿಂದೆ ಬರೆದಂತೆ ಬೆಂಗಳೂರಿನಲ್ಲಿ ದಲ್ಲಾಳಿಗಳಂತೆ ಭೂಗಳ್ಳರ ಜೊತೆ, ರಾಜಕಾರಣಿಗಳ ಜೊತೆ ಡೀಲ್ ಮೇಕರುಗಳಂತೆ ರಾರಾಜಿಸುವ ಪತ್ರಿಕೋದ್ಯಮಗಳನ್ನು ನೋಡಿದರೆ ವಾಕರಿಕೆ ಬರುತ್ತದೆ. ಅತ್ತ ಬಳ್ಳಾರಿಯಲ್ಲಿ ಗಣಿ ಲೂಟಿಯಲ್ಲಿ ಭಾಗಿಯಾಗಿರುವ ಮಾಧ್ಯಮ ಮಿತ್ರರೂ ಬಹಳ ಮಂದಿ ಸಿಗುತ್ತಾರೆ. ಗಣಿ ಧಣಿಗಳು ಎಸೆದ ಲ್ಯಾಪ್ ಟಾಪ್ ಎಂಜಲಿಗೆ ತಮ್ಮನ್ನೇ ಮಾರಿಕೊಂಡು ಪತ್ರಿಕಾಧರ್ಮವನ್ನು ಮರೆತು ರಾಜ್ಯದ ಮತ್ತು ದೇಶದ ಜನರನ್ನು ಕತ್ತಲಲ್ಲಿಟ್ಟಿರುವ ಇಂತಹ ಮಾಧ್ಯಮ ಮಂದಿಯನ್ನು, ಮಾಧ್ಯಮಗಳನ್ನು ಜನರು ನಂಬುವ ಕಾಲ ಹೋಗಿದೆ.

ಪತ್ರಿಕೆಗಳಲ್ಲಿ ಬರುವುದೆಲ್ಲಾ ಸತ್ಯವೆಂದು ನಂಬುವವರು ಪ್ರಾಯಶ: ಕೆಲ ಹಳ್ಳಿಯಲ್ಲಿ ಮಾತ್ರ ಸಿಗಬಹುದು - ಸಿಚುವೇಶನ್ ಅಷ್ಟು ಸೀರಿಯಸ್ಸಾಗಿದೆ. ಮಾಧ್ಯಮ ಮಿತ್ರರು ಕಣ್ಣು ಮುಚ್ಚಿ ಕುಡಿಯಬಹುದು, ಎದುರು ಸಿಗುವ ಜನರು ತಮಗೆ ಬೇಶಾವರಿ ನಗು ಬೀರಬಹುದು - ಆದರೆ ಹಿಂದಿನಿಂದ ವ್ಯಾಕರಿಸಿ ಉಗುಳದಿದ್ದರೆ ನೋಡಿ!

ಥೂ ನಿಮ್ಮ!