Sunday, June 19, 2011

ಇಂಟರನೆಟ್ಟಿನ ಕನ್ನಡ ತಾಲಿಬಾನಿಗಳು


ಕಳೆದ ವಾರ ಯಾರೋ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತೀಯ ತನ್ನ ಫೇಸ್ ಬುಕ್ಕಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಮಂತ್ರಿ ಚಂದ್ರು ಅವರ "ಕನ್ನಡೇತರರು ಕನ್ನಡ ಕಲಿಯಲೇಬೇಕು" ಎಂಬ ಹೇಳಿಕೆಯನ್ನು ತೆಗಳಿದ್ದನ್ನೇ ಆಕಾಶ ಬೀಳುತ್ತಿದೆಯೆಂದು ಪ್ರತಿಕ್ರಿಯಿಸಿದ ಕೆಲ ಕೆಲಸವಿಲ್ಲದ ಬ್ಲಾಗರುಗಳು ಈಗ ಆ ವ್ಯಕ್ತಿಗೆ ಜೀವ ಬೆದರಿಕೆ ಹಾಕುವಷ್ಟು ಮುಂದುವರಿದಿರುವುದು ಪ್ರಜ್ಣಾವಂತ ಕನ್ನಡಿಗರಿಗೆಲ್ಲಾ ಕಳಂಕ ತರುವಂತಹ ಸುದ್ದಿ.

ಕೆಲಸವಿಲ್ಲದೆ ಕಚೇರಿಯಲ್ಲಿ ಬೆಂಚಿನಲ್ಲಿರುವ ಕನ್ನಡ ಸಾಪ್ಟವೇರ್ ಇಂಜಿನಿಯರುಗಳು, ಕೊಲ್ಲಿ ರಾಷ್ಟ್ರಗಳಲ್ಲಿ ವೇಳೆ ಕಳೆಯುವುದು ಹೇಗೆ ಎಂದು ಗೊತ್ತಿಲ್ಲದ ಆಯಿಲ್ ಕಂಪೆನಿ ಕೆಲಸಗಾರರು ಇಂಟರನೆಟ್ಟು browse ಮಾಡುತ್ತಾ ಯಾರು ಕನ್ನಡದ ವಿರುದ್ದ ಸೊಲ್ಲೆತ್ತುತ್ತಾರೆಯೆಂಬುದನ್ನೇ ಕಾಯುತ್ತಾ ಕುಳಿತಿರುವಂತಿದೆ. ಅತ್ತ ಬೀದಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪುಂಡರು ಕನ್ನಡದ ಹೆಸರಲ್ಲಿ ರೋಲ್ ಕಾಲ್ ಉದ್ದಿಮೆ ನಡೆಸುತ್ತಿರುವಂತೆ, ಇತ್ತ ಇಂಟರನೆಟ್ಟಿನಲ್ಲಿ ಅಬ್ಬೇಪಾರಿಗಳಂತೆ ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತಿರುವ ಐಟಿ ಬಿಟಿಗಳು, wannabe ಪತ್ರಕರ್ತ ನಿರುದ್ಯೋಗಿಗಳು ಕನ್ನಡೇತರರ ವಿರುದ್ದ ಅಂತರ್ಜಾಲದಲ್ಲಿ ಮತ್ತೀಗ ದೂರವಾಣಿಯಲ್ಲಿ ಬೆದರಿಕೆ ಹಾಕುವಷ್ಟು ಮುಂದಿರುವುದು ಯಾವ ಕನ್ನಡ ಪ್ರೇಮವೆಂಬುದು ಅರ್ಥವಾಗುತ್ತಿಲ್ಲ.

ಈ ಇಂಟರನೆಟ್ಟು ಹೀರೋಗಳ "ಬೆಂಗಳೂರಲ್ಲಿ ಬದುಕಬೇಕಾದರೆ ಕನ್ನಡ ಕಲಿಯಲೇಬೇಕು" ಎಂಬ ವಾದವಾದರೂ logical ಅಥವಾ ಸಂವಿಧಾನ ಬದ್ಧವಾಗಿದೆಯೇ?

ಉತ್ತರ ಭಾರತೀಯನ ವಿರುದ್ದ ಅಂತರ್ಜಾಲದಲ್ಲಿ ಹಿಗ್ಗಾಮುಗ್ಗ ಬರೆದ ಅರಬ್ ರಾಷ್ಟ್ರದ ದೋಹಾ ಕತಾರಿನಲ್ಲಿ ಕುಳಿತಿರುವ ಪ.ರಾಮಚಂದ್ರ (ಖ್ಯಾತ ಪತ್ರಕರ್ತ ಪ.ಗೋಪಾಲಕೃಷ್ಣ ಅವರ ಸುಪುತ್ರ) "ಸಂಪಾದಕೀಯ" ಎಂಬ ಬ್ಲಾಗಿನಲ್ಲಿ ಹೇಗೆ ತಾನು ರಾಬಿನ್ ಚುಗ್ಗಿಗೆ ಫೋನ್ ಇಮೇಲ್ ಮಾಡಿದೆಯೆಂದು ಭಾರೀ ಹೀರೋ ತರಹ ಪೋಸ್ ಕೊಟ್ಟಿದ್ದಾರೆ. ತಾನು ಸ್ವತ: ಅರಬ್ ದೇಶದಲ್ಲಿ ಹಲವಾರು ವರ್ಷಗಳಿಂದ ಬದುಕುತ್ತಿರುವ ಇವರು ಅಲ್ಲಿನ ಸ್ಥಳೀಯ ಭಾಷೆ ಅರೇಬಿಕ್ ಕಲಿತಿದ್ದಾರೆಯೇ? ಮಕ್ಕಳಿಗೆ ಅರೇಬಿಕ್ ಕಲಿಸುತ್ತಿದ್ದಾರೆಯೇ (ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರೆಲ್ಲರು ತಮ್ಮ ಮಕ್ಕಳನ್ನು ಕಳಿಸುವುದು CBSE syllabus "ಇಂಡಿಯನ್ ಸ್ಕೂಲುಗಳಿಗೆ ಅಥವಾ ಅಮೆರಿಕನ್ ಸ್ಕೂಲುಗಳಿಗೆ - ಎಲ್ಲೂ ಅರೇಬಿಕ್ ಕಲಿಸುವುದಿಲ್ಲ) ಎಂದು ಪ್ರಶ್ನಿಸಬೇಕಾಗುತ್ತದೆ.

ಇತ್ತ ಇಂಟರನೆಟ್ಟಿನಲ್ಲಿ ಕನ್ನಡ ಪರ ಬೊಬ್ಬೆ ಹಾಕುವ ಐಟಿ ಬಿಟಿ ಅಥವಾ ಕನ್ನಡ ಪತ್ರಕರ್ತರು ಎಷ್ಟು ಜನ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿದ್ದಾರೆ? ತಾವೇ ಎಲ್ಲೋ ಪರ ರಾಷ್ಟ್ರಗಳಲ್ಲಿ ಸ್ಠಳೀಯ ಭಾಷೆ ಕಲಿಯದೆ ಜೀತದಾಳುಗಳಾಗಿ ಬದುಕುತ್ತಿರುವ ಈ NRIಗಳಿಗೆ ಕನ್ನಡೇತರರು ಕನ್ನಡ ಕಲಿಯಲೇಬೇಕೆಂಬ ಹಠವಾದರೂ ಏಕೆ?

ಹೀಗೆ ಗಾಜಿನ ಮನೆಯಲ್ಲಿ ಕುಳಿತಿರುವವರು ಯಾವನೋ ರಾಬಿನ್ ಚುಗ್ ನ ಕಂಪೆನಿ ಹೆಸರನ್ನು ಬ್ಲಾಗುಗಳಲ್ಲಿ ಹಾಕುವುದು, ಅವನಿಗೆ ಫೋನ್ ಮಾಡಿ ಜೀವ ಬೆದರಿಕೆ ಹಾಕುವುದು, ಅವನ ಕಂಪೆನಿ HRಗೆ ಫೋನ್ ಮಾಡಿ ಅವನನ್ನು ಕೆಲಸದಿಂದ ತೆಗೆಯುವಂತೆ ಒತ್ತಾಯ ಮಾಡುವುದು - ಇದು ಯಾವ ಕನ್ನಡ ಪ್ರೇಮ ಸ್ವಾಮೀ?

ನಾಳೆ ಮಂಗಳೂರು, ಉಡುಪಿಯವರು "ಹೊರಗಿನವರು ಇಲ್ಲಿ ಬದುಕಬೇಕಾದರೆ ತುಳು/ಕೊಂಕಣಿಯನ್ನು ಒಂದು ವರ್ಷದೊಳಗೆ ಕಲಿಯುವುದು ಕಡ್ಡಾಯ" ಎಂದು ಚಳುವಳಿ ಮಾಡಿದರೆ ಉಗ್ರ ಕನ್ನಡ ಓರಾಟಗಾರರು ಏನ್ನೆನ್ನುತ್ತಾರೋ?

ಹೇಳೀ ಕೇಳೀ ಮುಖ್ಯಮಂತ್ರಿ ಚಂದ್ರು ಒಬ್ಬ ರಾಜಕಾರಣಿ - populist ಹೇಳಿಕೆಗಳನ್ನು ನೀಡುವ ಸಂವಿಧಾನಬದ್ಧವಲ್ಲದ "ಕನ್ನಡ ಅಭಿವೃದ್ದಿ ಪ್ರಾಧಿಕಾರ"ವೆಂಬ ಹಲ್ಲಿಲ್ಲದ ಸಂಸ್ಠೆಯ ಅಧ್ಯಕ್ಷ. ಸದಾ ಸುದ್ದಿಯಲ್ಲಿರಲು ಇಂತಹ ಹೇಳಿಕೆಗಳನ್ನು (ಒಂಥರಾ ಹೇಳಿಕೆಗಳಲ್ಲೇ ಹೀರೋ ಆಗುತ್ತಿರುವ ಲೋಕಾಯುಕ್ತ ಸಂತೋಷ ಹೆಗ್ಡೆಯವರಂತೆ!) ನೀಡುತ್ತಿರುವುದು ಅನಿವಾರ್ಯ. ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇಂತಹ ತುಘಲಕ್ ಯೋಜನೆಗಳನ್ನು ಸರಕಾರಕ್ಕೆ recommend ಮಾಡಬಹುದಷ್ಟೇ. ಯಾವುದೇ ಶಾಸನ ಸಭೆ ಯಾ ಸರಕಾರ ಚಂದ್ರು ಅವರ ಸಂವಿಧಾನದ ಮೂಲಭೂತ ಹಕ್ಕುಗಳ ಆಶಯಕ್ಕೆ ವಿರುದ್ಧವಾಗಿರುವ recommendation ಒಪ್ಪುವುದು ಸಾಧ್ಯವೇ ಇಲ್ಲ - ಒಪ್ಪಿದರೂ ನ್ಯಾಯಾಲಯಗಳು ಅವನ್ನು ಒಪ್ಪುವುದು ಕಷ್ಟ.

ಅದು technicalityಯಾದರೆ, ಇನ್ನು economic impact ಬಗ್ಗೆ ಯೋಚಿಸಿದ್ದಾರೆಯೇ? ಈ ಎಲ್ಲಾ ಕಂಪೆನಿಗಳು ಬಾಗಿಲು ಮುಚ್ಚಿ ಹೋದರೆ ಅದರ ಹೊಡೆತ ಬೀಳುವುದು ಬಡ ಕನ್ನಡಿಗರಷ್ಟೇ. ಯಾಕೆಂದರೆ ಈ ಐಟಿ ಬಿಟಿಗಳು ಜರ್ಮನಿ, ಅಮೆರಿಕಾ ಎಂದು ಬುರ್ರೆಂದು ಹಾರಿಹೋಗುತ್ತಾರೆ. ಪ.ರಾಮಚಂದ್ರರಂತವರು ಕೊಲ್ಲಿ ರಾಷ್ಟ್ರಗಳಲ್ಲಿ ಹಾಯಾಗಿ ತಮ್ಮ ಜೀತದ ಕೆಲಸದಲ್ಲಿ ಮಗ್ನರಾಗುತ್ತಾರೆ. ಆದರೆ ಮುಚ್ಚಿದ ಕಂಪೆನಿಯ ಬಡ ಸೆಕ್ಯೂರಿಟಿ ಗಾರ್ಡುಗಳು, ಡ್ರೈವರುಗಳು, ಕ್ಯಾಂಟೀನ್ ಹುಡುಗರು ತಮ್ಮ "ಕನ್ನಡ ಹೊಟ್ಟೆ" ಮೇಲೆ ತಣ್ಣಗಿನ ಬಟ್ಟೆ ಹಾಕಿಕೊಳ್ಳಬೇಕಷ್ಟೇ.

ಭಾರತದ ಸಂವಿಧಾನ ಭಾರತೀಯ ಪ್ರಜೆಗಳೆಲ್ಲರಿಗೂ ದೇಶದೊಳಗೆ ಎಲ್ಲಿ ಬೇಕಾದರೂ ಹೋಗಿ ನೆಲೆಸುವ, ತಮ್ಮ ಭಾಷೆ ಸಂಸ್ಕೃತಿ ಆಚರಿಸುವ ಮೂಲಭೂತ ಹಕ್ಕು ನೀಡಿದೆ. ಇದನ್ನು ತಿಳಿದೂ ಅಥವಾ ತಿಳಿಯದೆಯೋ ಈ ಇಂಟರನೆಟ್ಟಿನ NRI, ಕನ್ನಡ ತಾಲಿಬಾನಿಗಳು ತಮ್ಮ ಮನೆಯಲ್ಲಿ, ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸುವ ಧೈರ್ಯ ತೋರಿಸಲಿ. ಪ್ರತಿ ವರ್ಷ ಡಜನುಗಟ್ಟಳ್ ಕನ್ನಡ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುತ್ತಿವೆ - ಮುಂದಿನ ಪೀಳಿಗೆಯೇ ಕನ್ನಡ ಎಂದರೆ ಏನು ಎಂದು ಪ್ರಶ್ನಿಸುವ ಪರಿಸ್ಥಿತಿ ಇಂದಿದೆ.

ಇಂತಹ ಮುಖ್ಯವಾದ ವಿಷಯಗಳನ್ನು ಚರ್ಚಿಸುವ ಬದಲು ಯಾರೋ ತನ್ನ ಖಾಸಗಿ ಫೇಸ್ ಬುಕ್ಕಿನಲ್ಲಿ ಏನೋ ಕಮೆಂಟು ಮಾಡಿದ ಎಂದು ಅವನಿಗೆ ಜೀವ ಬೆದರಿಕೆ, ಅವನ ಕಂಪೆನಿಯ HR ವಿಭಾಗಕ್ಕೆ ದೂರು ಕೊಟ್ಟು ಅವನನ್ನು ಕೆಲಸದಿಂದ ತೆಗೆದು ಹಾಕುವಂತೆ ಬೆದರಿಕೆ ಹಾಕುವ ತನಕ ಈ ವಿಷಯವನ್ನು ಎಳೆದಿರುವುದು ತಾಲಿಬಾನಿತನವಲ್ಲದೆ ಮತ್ತೇನು?

ಈ ಇಂಟರನೆಟ್ಟು ಗೂಂಡಾಗಿರಿ ನಾಯಕತ್ವ ವಹಿಸಿದ ಹೊಳೇನರಸೀಪುರ ಮಂಜುನಾಥ ತಿಮ್ಮಯ್ಯ - ಈ ವ್ಯಕ್ತಿಯೂ ಅರಬ್ ರಾಷ್ಟ್ರಗಳಲ್ಲಿ ಎಷ್ಟೋ ವರ್ಷ ದುಡಿದರೂ ಅರೇಬಿಕ್ ಕಲಿತ್ತಿದ್ದಾರೆಯೇ ಎಂದು ಕೇಳಬೇಕಾಗಿದೆ.

ಪೇಜ್ ಹಿಟ್ ದುರಾಶೆಯಲ್ಲಿ ಉದ್ರೇಕಕಾರಿ ಬರಹಗಳನ್ನು ಪ್ರಕಟಿಸಿ ಅಂತರ್ಜಾಲದ Mobಗಳನ್ನು ಛೂ ಬಿಡುವ "ಸಂಪಾದಕೀಯ" ಬ್ಲಾಗ್ ಮತ್ತಿತರ motive ಓಕೆ ಎನ್ನೋಣ - ಆದರೆ ಪ.ರಾಮಚಂದ್ರ, ಹೊಳೇನರಸೀಪುರ ಮಂಜುನಾಥರಂತಹ otherwise perfectly reasonable ಜನ, ತಾವು ಗಾಜಿನ ಮನೆಯಲ್ಲಿ ಕುಳಿತ್ತಿದ್ದರೂ ಇಂಟರನೆಟ್ಟಿನಲ್ಲಿ ಭಾಷಾಂಧರಾಗಿ ತಾಲಿಬಾನಿಗಳ ತರಹ ವರ್ತಿಸುವುದು ಕಂಡಾಗ ಬೇಸರವಾಗುತ್ತದೆ.

*************
ಅಂದ ಹಾಗೆ ಕ.ರಾ.ವೇ.ಯ ನಾರಾಯಣ "ರೋಲ್ ಕಾಲ್" ಗೌಡರು ಏಕ್ ದಂ ತಣ್ಣಗಾಗಿ ಹೋಗಿರುವುದನ್ನು ಗಮನಿಸಿದ್ದೀರೆಯೇ? ತನ್ನ ಸ್ವಜಾತಿ ಬಾಂಧವ ಅಶೋಕ ಗೃಹ ಮಂತ್ರಿಯಾದ ಕೂಡಲೇ ನಾರಾಯಣ ಗೌಡರು ಗಪ್ ಚುಪ್! ಒಂದು ಮೂಲದ ಪ್ರಕಾರ ಕರಾವೇಯ ಪುಂಡರ ಮೇಲಿರುವ ಕೇಸುಗಳನ್ನು ತೆಗೆಯುವ ಭರವಸೆ ಅಶೋಕರಿಂದ ದೊರೆತಿದೆಯಂತೆ. ಇನ್ನೊಂದು ಮೂಲದ ಪ್ರಕಾರ ತನ್ನ ಆಡಳಿತದಲ್ಲಿ ಕರಾವೇ ಯಾವುದೇ ಗೂಂಡಾಗಿರಿ ಮಾಡದೇ ಇರಲು ಅಶೋಕರಿಂದ ಗೌಡರಿಗೆ ಅದೆಷ್ಟೋ ಕಪ್ಪ ಕಾಣಿಕೆ ಸಂದಾಯವಾಗಿದೆಯಂತೆ. ಏನೇ ಇರಲಿ ಕರಾವೇ ಪುಂಡರ ದಾದಾಗಿರಿ, ಪುಂಡಾಟ ತಣ್ಣಗೆ ಆಗಿರುವುದಂತೂ ನಿಜ!