ಮಾಧ್ಯಮ ಮಿತ್ರರ ಕೋಳಿ ಜಗಳ ನೋಡೋ ಬಾರಾ: ವಿಶ್ವೇಶ್ವರ ಭಟ್ vs ರವಿಕೃಷ್ಣಾ ರೆಡ್ಡಿ!
ಊರಿಗೆಲ್ಲಾ ಉಪದೇಶ ಮಾಡುವ ಮಾಧ್ಯಮ ಮಿತ್ರರು ತಮ್ಮೊಳಗೇ ಜಗಳ ಮಾಡಿಕೊಂಡು ಒಳಗಿನ ರಾಡಿಯನ್ನು ಹೊರಹಾಕುವುದನ್ನು ನೋಡುವುದೇ ಚೆಂದ.
ಒಂದೆಡೆ "ವಿಕ್ರಾಂತ ಕರ್ನಾಟಕ"ವೆಂಬ ಅನಿಯಮಿತ ವಾರಪತ್ರಿಕೆ - ಒಂದು ವಾರ ಮಾರುಕಟ್ಟೆಗೆ ಬಂದರೆ ಮತ್ತೆರಡು ವಾರ ನಾಪತ್ತೆ ಈ ಪತ್ರಿಕೆ! - ಸ್ಥಾಪಿಸಿದ ಅದೇ ಹಳಸಲು ಔಟ್ ಡೇಟೆಡ್ ಲಂಕೇಶ್ ಚಿಂತನೆಯ ಕೆಲಸವಿಲ್ಲದ ಟೆಕ್ಕಿ ರವಿಕೃಷ್ಣಾ ರೆಡ್ಡಿ.
ಇನ್ನೊಂದೆಡೆ "ವಿಜಯ ಕರ್ನಾಟಕ"ದ ಸಂಪಾದಕ ವಿಶ್ವೇಶ್ವರ ಭಟ್ಟರು.
ಇಬ್ಬರೂ ತಮ್ಮ ತಮ್ಮ ಪತ್ರಿಕೆಗಳಲ್ಲಿ ಇನ್ನೊಬ್ಬರ ವಿರುದ್ಧ ಬರೆದುಕೊಂಡು ಓದುಗರಿಗೆ ಪುಕ್ಕಟೆ ಮನೋರಂಜನೆ ನೀಡುತ್ತಿದ್ದಾರೆ.
ಮೊದಲ ಫಿರಂಗಿ ಸಿಡಿಸಿದ್ದು ರವಿಕೃಷ್ಣಾ ರೆಡ್ಡಿಗಾರು. ಯಡ್ಡ್ಯೂರಪ್ಪ ವಿರೋಧೀ ಪತ್ರಿಕಾವರದಿಗಳನ್ನು ಪ್ರಕಟಿಸುವುದರ ಮೂಲಕ ಅನಂತಕುಮಾರರ ಭಟ್ಟಂಗಿ ಕೆಲಸವನ್ನು ವಿಶ್ವೇಶ್ವರ ಭಟ್ ಮಾಡುತ್ತಿದ್ದಾರೆಯೆಂಬುದು ಅವರ ಮಾರ್ಚ್ ೨೦ರ ಅಂಕಣದ ತಿರುಳು. "ಅನಂತ ನಿಷ್ಠ ಭಟ್" ಎಂಬ ಹೆಡ್ಡಿಂಗ್ ಮೂಲಕ ಪ್ರಕಟವಾದ ಈ ಲೇಖನವನ್ನು ರವಿಕೃಷ್ಣಾ ರೆಡ್ಡಿಯ ಬ್ಲಾಗಲ್ಲೂ ನೋಡಬಹುದು.
ವಿಶ್ವೇಶ್ವರ ಭಟ್ಟರು ಸುಮ್ಮನೆ ಬಿಡುತ್ತಾರೆಯೇ? ತಮ್ಮದೇ ಶೈಲಿಯಲ್ಲಿ ಅವರ ಭಾನುವಾರದ ಅಂಕಣದಲ್ಲಿ ರವಿ ಕೃಷ್ಣಾ ರೆಡ್ಡಿಗೆ ಸರಿಯಾಗಿಯೇ ಜಡಿದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅದಾವುದೋ ಮೌಲ್ಯಾಗ್ರಹದ ಹೆಸರಲ್ಲಿ ದೊಡ್ಡದೊಡ್ಡ ಬಡಾಯಿ ಕೊಚ್ಚಿಕೊಂಡು, ಉಪವಾಸ ಮಾಡಿ ಬಿಟ್ಟಿ ಪ್ರಚಾರ ಪಡೆದುಕೊಂಡರೂ ಕೇವಲ ೨೦೦ ಮತಗಳನ್ನು ಪಡೆದ ರವಿಕೃಷ್ಣಾ ರೆಡ್ಡಿ ಬಗ್ಗೆ ಕನಿಕರ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಈ-ಮೇಲ್ ಮೂಲಕ ಸಂಗ್ರಹಿಸಿದ ೪.೨೦ ಲಕ್ಷ ರೂಪಾಯಿಗೇನಾಯಿತೆಂದು ಕೇಳಿದ್ದಾರೆ.
ಒಂದೆಡೆ ನೋಡಿದಾಗ ಭಟ್ಟರು ಈ ರೆಡ್ಡಿಗೆ ಜಡಿದದ್ದು ಕಮ್ಮಿಯೇ ಆಯಿತೆಂದೆನಿಸುತ್ತದೆ.
ಸ್ವಂತ ಯೋಚನೆಯಿಲ್ಲದೆ ಲಂಕೇಶ್ ಹಳಸಲು ಯೋಚನೆಗಳಿಗಿಂದ ಹೊರಬಾರದೆ, ದೂರದ ಅಮೆರಿಕಾದಲ್ಲಿ ಕುಳಿತು ಇಂಟರನೆಟ್ಟುಗಳಲ್ಲಿ ತನ್ನ ಪೆದ್ದು ಮುಖದ ವೀಡಿಯೋಗಳನ್ನು ತಾನೇ ಮಾಡಿಕೊಂಡು ಆದರ್ಶವಾದಿಯಂತೆ ಪೋಸು ಕೊಡುವ ರವಿಕೃಷ್ಣಾ ರೆಡ್ಡಿಯ ನೋಡಿದರೆ ನಗು ಬರುತ್ತದೆ.
ಅಮೆರಿಕದಲ್ಲಿ ಕೆಲಸವಿಲ್ಲದಾಗ ಭಾರತಕ್ಕೆ ಬಂದು ವಿಚಾರಗೋಷ್ಠಿಯ ಹೆಸರಲ್ಲಿ ತನ್ನಂತೆಯೇ ಲಂಕೇಶ್ ಪ್ರಪಂಚದಿಂದ ಹೊರಬರದ ಸಮಾನಮನಸ್ಕರ ಜೊತೆ ಕೂತು ಎಲ್ಲರನ್ನೂ ಬೋರು ಹೊಡೆಸುವ ಆಸಾಮಿ ಈ ರವಿಕೃಷ್ಣಾ ರೆಡ್ಡಿ.
ದೇಶ ದ್ರೋಹಿ ನಕ್ಸಲರೊಂದಿಗೆ ಈ-ಮೇಲ್ ಹಂಚಿಕೊಳ್ಳುವ ಈ ರವಿಕೃಷ್ಣಾ ರೆಡ್ಡಿ ಇವತ್ತೂ ಉಡುಪಿಯಲ್ಲಿ ಜನಪರ ವೇದಿಕೆಯೆಂಬ ನಕ್ಸಲ್ ಪ್ರೇಮಿ ಸಂಘಟನೆಯ ಜೊತೆ ಸೇರಿ ಅದಾವುದೋ ವಿಚಾರಗೋಷ್ಠಿ ಆಯೋಜಿಸಿದ್ದಾರೆ.
ಲೋಹಿಯಾವಾದ, ಲಂಕೇಶ್ ಹೆಸರಲ್ಲಿ ಬೋರು ಹೊಡೆಸುವ ರವಿಕೃಷ್ಣಾ "ರೆಡ್ಡಿ", ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಕೂಟದ ಅಧ್ಯಕ್ಷನಾಗಿದ್ದಾಗ ಕನ್ನಡ ಬಳಗವನ್ನು ಜಾತಿಯ ಆಧಾರದಲ್ಲಿ ವಿಭಜಿಸಿದನ್ನು ಅಲ್ಲಿಯ ಕನ್ನಡಿಗರು ಇಂದಿಗೂ ನೆನಪಿಟ್ಟುಕೊಂಡಿದ್ದಾರೆಯೆಂದು ಅಲ್ಲಿಂದ ಬಂದ ಓರ್ವ ಮಿತ್ರ ಹೇಳುತ್ತಿದ್ದ.
ಅಲ್ಲಾ ಭಟ್ಟರು ಅನಂತಕುಮಾರ್ ಭಟ್ಟಂಗಿ, ಪಕ್ಷಪಾತಿಗಳೆಂದೆಲ್ಲಾ ಹೇಳುವ ರೆಡ್ಡಿ, ತನ್ನ "ವಿಕ್ರಾಂತ ಕರ್ನಾಟಕ"ದ ಡಮ್ಮಿ ಸಂಪಾದಕನಾದ ತನ್ನ ಅಣ್ಣ ಜನತಾದಳದ ಸಕ್ರಿಯ ಕಾರ್ಯಕರ್ತ / ಪದಾಧಿಕಾರಿಯೆಂಬುದನ್ನು ಬಚ್ಚಿಡುವುದರ ರಹಸ್ಯವೇನು?
ಇನ್ನು ಲೋಕಕ್ಕೆಲ್ಲಾ ವಿಚಾರ ಹೇಳುವ ರವಿಕೃಷ್ಣಾ ರೆಡ್ಡಿಯ ಅಸಲು ಏನೆಂಬುದು "ವಿಕ್ರಾಂತ ಕರ್ನಾಟಕ"ವನ್ನು ನೋಡಿದರೆಯೇ ತಿಳಿಯುತ್ತದೆ. ಬೇರೆಯವರಿಗೆ ಉಚಿತ ಉಪದೇಶವನ್ನು ಪುಂಖಾನಪುಂಖವಾಗಿ ನೀಡುವ ಈ ರವಿಕೃಷ್ಣಾ ರೆಡ್ಡಿ ಮೊದಲು ತನ್ನ ಪತ್ರಿಕೆಯವನ್ನು ಪ್ರತಿ ವಾರ ಸರಿಯಾಗಿ ಹೊರತರಲಿ. ಇನ್ನೂ "ವಿಕ್ರಾಂತ ಕರ್ನಾಟಕ"ದ ಬಗ್ಗೆ, ಅದರ "ಗೌರವ ಸಂಪಾದಕ" "ರಾಮಕೃಷ್ಣ ಹೆಗಡೆ ಸರಕಾರ ಬಂದದ್ದೇ ನನ್ನಿಂದ" ರವೀಂದ್ರ ರೇಷ್ಮೆಯೆಂಬ ಇನ್ನೊಂದು ಲಂಕೇಶ್ ಪಳೆಯುಳಿಕೆ ಬಗ್ಗೆ ಬರೆಯುವುದು ಬಹಳಷ್ಟಿದೆ - ಇನ್ನೊಂದು ಬ್ಲಾಗ್ ಪೋಸ್ಟ್ ನಿರೀಕ್ಷಿಸಿ. ಸದ್ಯಕ್ಕೆ ಕಾಫಿ ಕುಡಿಯುತ್ತಾ ಈ ಇಬ್ಬರ ಜಗಳ ಎಂಜಾಯ್ ಮಾಡಿ.
ಅತ್ತ ಚುನಾವಣೆಯಲ್ಲೂ ಠೇವಣಿ ಉಳಿಸಿಕೊಳ್ಳಲಾಗದ ಈ ರೆಡ್ಡಿ ಇತ್ತ ಸರಿಯಾಗಿ ಪ್ರತಿವಾರ ಪತ್ರಿಕೆ ಹೊರತರಲಾರದೆ ಮಾಧ್ಯಮ ಲೋಕದಲ್ಲೂ ಫ್ಲಾಪ್. ಒಟ್ಟಾರೆ ರೆಡ್ಡಿಯಂತಹ ಜೋಕರುಗಳೂ ನಮಗೆ ಪುಕ್ಕಟೆ ಮನರಂಜನೆ ನೀಡುತ್ತಿದ್ದಾರೆಂಬುದು ನಿಜ!
ರವಿ ರೆಡ್ಡಿಯ ಕಭೀ ಹಾಂ ಕಭೀ ಹಾಂ ವಾರಪತ್ರಿಕೆಯ ಬೆರಳೆಣಿಕೆಯ ಓದುಗರೆದುರು, ಪ್ರತಿನಿತ್ಯ ಲಕ್ಷಗಟ್ಟಳೆ ಓದುಗರನ್ನು ಹೊಂದಿರುವ ವಿಶ್ವೇಶ್ವರ ಭಟ್ಟರು ಈ ರೌಂಡಿನಲ್ಲಿ "ವಿಜಯ" ಸಾಧಿಸಿದ್ದಾರೆಯೆಂದು ಹೇಳೋಣವೇ?