Monday, November 2, 2009

ರೆಡ್ಡಿಗಳ ಕಪಿ ಮುಷ್ಠಿಯಿಂದ ಕರ್ನಾಟಕಕ್ಕೆ ಮುಕ್ತಿಯೆಂದು?ಮಾಧ್ಯಮಗಳಲ್ಲಿ ನಡೆಯುತ್ತಿರುವ ಭಿನ್ನಮತ - ರೆಡ್ಡಿಗಳ ಮುಷ್ಠಿಯಲ್ಲಿ ಕರ್ನಾಟಕದ ಮಾಧ್ಯಮ ಮಿತ್ರರು

ರಾಜಶೇಖರ ರೆಡ್ಡಿಯ ಹೆಲಿಕಾಪ್ಟರ್ ಪರ್ವತಕ್ಕಪ್ಪಳಿಸಿ ಬಾಡಿ ಸಿಗುವುದರೊಳಗೆ ಜಗನ್ ತನ್ನ ಟಿ.ವಿ. ಮತ್ತು ದಿನಪತ್ರಿಕೆಯ ಮೂಲಕ ಆಂಧ್ರ ಮತ್ತು ದೇಶದಾದ್ಯಂತ create ಮಾಡಿದ emotion ಭಾರತದ ಮಾಧ್ಯಮಗಳ ಸುದ್ದಿ coverage ಮಟ್ಟಿಗೆ ಒಂದು turning point. ದಿಢೀರನೆ ಎಲ್ಲಿಂದಲೋ ಬಂದ ನೂರಾರು ಜನರು ಜಿಲ್ಲೆ ಜಿಲ್ಲೆಗಳ ಕಾಂಗ್ರೆಸ್ ಕಚೇರಿ ಮುಂದೆ ಅರ್ತನಾದಿಸಿದ್ದೇನು, ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಯೆಂದು ಬೊಬ್ಬೆ ಹಾಕಿದ್ದೇನು, ಜಗನ್ ಬಿಟ್ಟರೆ ಇನ್ನು ರಾಜ್ಯಕ್ಕೆ ಉಳಿಗಾಲವಿಲ್ಲವೆಂದು ಟಿ.ವಿ.ಯಲ್ಲಿ ಪ್ರದರ್ಶಿಸಿದ್ದೇನು!

ಇದೇ ಮಾಧ್ಯಮ strategyಯನ್ನು ಬಳ್ಳಾರಿಯ ಮಣ್ಣು ಮಾರಿ ಬದುಕುತ್ತಿರುವ ರೆಡ್ಡಿ ಬ್ರದರ್ಸ್ ಈಗ ಕರ್ನಾಟಕದಲ್ಲಿ ಭಿನ್ನಮತ ರಾಜಕಾರಣಕ್ಕೆ ಉಪಯೋಗಿಸುತ್ತಿದ್ದಾರೆ. ಹೇಗೂ ಜಗನ್ ರೆಡ್ಡಿಯ ಖಾಸಾ ದೋಸ್ತಿಗಳು ನೋಡಿ?

ಈ ರೆಡ್ಡಿಗಳು ಬಿಸಾಕುತ್ತಿರುವ ಬ್ರೆಡ್ ತಿನ್ನಲ್ಲು ನಾಮುಂದೆ ತಾಮುಂದೆಯೆಂದು ಜೊಲ್ಲು ಸುರಿಸಿ ತಿನ್ನುತ್ತಿರುವವರು MLAಗಳು ಮಾತ್ರವಲ್ಲ, ಮಾಧ್ಯಮ ಮಿತ್ರರೂ ಎಂದು ಹೇಳಲು ವಿಷಾದವಾಗುತ್ತದೆ.

ಇಡೀ ಬಳ್ಳಾರಿಯನ್ನು ಗಣಿಗಾರಿಕೆ ನೆಪದಲ್ಲಿ ಅಗೆದು ಮಾರಿ ತಮ್ಮ ಮನೆ, ಹೆಲಿಕಾಪ್ಟರ್, MLAಗಳನ್ನು ಇಟ್ಟುಕೊಂಡಿರುವ ಈ ಬಳ್ಳಾರಿ ರೆಡ್ಡಿಗಳು ಬಳ್ಳಾರಿಯ ಪತ್ರಕರ್ತ ಮಿತ್ರರಿಗೆ ಪ್ರತಿ ವರ್ಷ laptop, ಕೆಮರಾಗಳನ್ನು ಭಿಕ್ಷೆಯಾಗಿ ನೀಡುತ್ತಾ ಇಟ್ಟುಕೊಂಡಿರುವುದು ಎಲ್ಲರಿಗೂ ತಿಳಿದಿದೆ. ಆದರೆ ರಾಜ್ಯ ಮಟ್ಟದಲ್ಲೂ ಈ ರೆಡ್ಡಿಗಳು ಪ್ರಾಯಶ: ಎಲ್ಲಾ ಪ್ರಮುಖ ಮಾಧ್ಯಮ ಮಿತ್ರರನ್ನು "ಸಾಕಿಕೊಂಡಿರುವುದು" ಇತ್ತೀಚಿನ ಭಿನ್ನಮತ ಸ್ಪೋಟದಲ್ಲಿ ಸ್ಪಷ್ಟವಾಗಿದೆ.

ಇಲ್ಲದಿದ್ದರೆ ಯಾವ ಮಾಧ್ಯಮ ಮಿತ್ರರೂ ಈ ರೆಡ್ಡಿಗಳಿಗೆ ಕೆಳಗಿನ ಪ್ರಶ್ನೆಗಳನ್ನೇಕೆ ಕೇಳುತ್ತಿಲ್ಲ:
  • ಇಡೀ ರಾಜ್ಯವೇ ನೆರೆಯಲ್ಲಿ ಕೊಚ್ಚಿ ಹೋಗಿರುವಾಗ ಭಿನ್ನಮತದ ಕಹಳೆ ಊದುವುದು ಯಾವ ಜನಪರ ಕಾರ್ಯ?
  • ತಾವು ಮಂತ್ರಿಗಳಾಗಿ ೧೬ ತಿಂಗಳಾಯಿತು - ತಮ್ಮ ಸಾಧನೆ ಏನು?
  • ಶ್ರೀರಾಮುಲು - ಈ ಮಹಾನುಭವ ಆರೋಗ್ಯ ಖಾತೆಯಂತಹ ಪ್ರಮುಖ ಖಾತೆ ಇಟ್ಟುಕೊಂಡಿದ್ದರೂ ಹಂದಿ ಜ್ವರದಂತಹ ಹೆಮ್ಮಾರಿ ಬಂದಿರುವಾಗ ಅಲ್ಲೇ ಬಳ್ಳಾರಿ ಹೈದರಾಬಾದಿಗೆ ತನ್ನ ಮೇಕಪ್ಪಿಗಾಗಿ ಹಾರಾಡುತ್ತಿದ್ದ ವಿನ: ವಿಧಾನಮಂಡಳದಲ್ಲಿ ಕಂಡು ಬಂದದ್ದು ಬೆರಳೆಣಿಕೆಯ ದಿನಗಳಲ್ಲಷ್ಟೇ. ಇತ್ತೀಚೆಗೆ ರಾಜ್ಯದ ಸರಕಾರೀ ವೈದ್ಯರು ರಾಜೀನಾಮೆ ಬೆದರಿಕೆ ಹಾಕಿದ್ದಾಗ ಕಾಣೆಯಾಗಿದ್ದ ಈ ಆಸಾಮಿಯ ಕೆಲಸವನ್ನು ಕಡೆಗೆ ಅದೇ ಯಡ್ಡಿ, ರಾ.ಗೌಡ, ಆಚಾರ್ಯರಂತವರು ಮಾಡಿ ಬಿಕ್ಕಟ್ಟು ಪರಿಹಾರ ಮಾಡಿದರು. ಜನರು ನೆರೆಯಲ್ಲಿ ಮುಳುಗಿರುವಾಗ ಶ್ರೀರಾಮುಲು ತನ್ನ ಮಿತ್ರರೊಂದಿಗೆ ಹೆಲಿಕಾಪ್ಟರಿನಲ್ಲಿ ಹಾರಾಡುತ್ತಾ ಅತ್ತ ಸಿನೆಮಾ ನೋಡುತ್ತಿದ್ದದ್ದು ಸರಿಯೇ?
  • ಕರುಣಾಕರ ರೆಡ್ಡಿ - ಕಂದಾಯದಂತಹ ಅತಿ ಪ್ರಮುಖ ಖಾತೆಯನ್ನು ಹೊಂದಿರುವ ಈ ಆಸಾಮಿ ರಾಜ್ಯವಿಡೀ ನೆರೆ ನೀರಿನಲ್ಲಿ ಮುಳುಗಿರುವಾಗ ಕೆಲ ಫೊಟೋಗಳಲ್ಲಿ ಮಿಂಚಿದರೇ (ಅದೂ ತನ್ನ ಮನೆಯಿರುವ ಬಳ್ಳಾರಿಯಲ್ಲಿ) ವಿನ: ತಾನು ರಾಜ್ಯದ ಕಂದಾಯ ಮಂತ್ರಿಯೆಂಬುದನ್ನು ಮರೆತು ಬಳ್ಳಾರಿಯಲ್ಲೇ ವಾರಗಟ್ಟಳೆ ಕೂತು ತನ್ನ ಗಣಿ ವ್ಯವಹಾರವನ್ನು ನೋಡಿ ಕೊಳ್ಳುತ್ತಿರುವುದು ಸರಿಯೇ?
  • ಇನ್ನು ಜನಾರ್ಧನ ರೆಡ್ಡಿ ಒಮ್ಮೆ ತಮ್ಮನ್ನು ಕುಮಾರಸ್ವಾಮಿ, ಚೆನ್ನಿಗಪ್ಪರ ವೀಡಿಯೋ ಇದೆ ಎಂದೆಲ್ಲಾ fool ಮಾಡಿದ್ದನ್ನು ಪತ್ರಕರ್ತ ಮಿತ್ರರು ಮರೆತಂತಿದೆ. ಇವತ್ತು ಗಣಿ ಲಂಚದ ವೀಡಿಯೋ ತೋರಿಸುತ್ತೇನೆ, ನಾಳೆ ತೋರಿಸುತ್ತೇನೆ ಎಂದೆಲ್ಲಾ ಹೇಳಿ ಬೆಂಗಳೂರು ಬಳ್ಳಾರಿ ನಡುವೆ ಪತ್ರಕರ್ತರನ್ನು ಓಡಾಡಿಸಿದ ಈ ಆಸಾಮಿ ಬರೀ ಟೊಳ್ಳುವೆಂದು ಜನರಿಗೆ ಯಾವಾಗಲೋ ಅರ್ಥವಾಗಿದೆ.
  • ಇನ್ನು ಜಗದೀಶ ಶೆಟ್ಟರ್ ಎಂಬ ಹುಬ್ಬಳ್ಳಿಯಾಂವನ ಬಗ್ಗೆಯೇನು ಹೇಳಬೇಕು? ಕುಮಾರಸ್ವಾಮಿಯ ೧೮ ತಿಂಗಳ ಸರಕಾರದಲ್ಲಿ ಕಂದಾಯ ಮಂತ್ರಿಯಾಗಿ ಅವರ ಸಾಧನೆಯೇನು ಎಂದು ಕೇಳಬೇಕಾಗುತ್ತದೆ. ಎಷ್ಟೇ ನೆನೆದರೂ ಈ ಶೆಟ್ಟರ್ ಕಂದಾಯ ಮಂತ್ರಿಯಾಗಿ ಏನು ಕಡೆದು ಹಾಕಿದರು ಎಂದು ನೆನಪಾಗುತ್ತಿಲ್ಲ. ಒಂದು ಮೂಲದ ಪ್ರಕಾರ ಆ 16 ತಿಂಗಳಲ್ಲಿ ಶೆಟ್ಟರ್ ಹಾಗೂ ಅವರ ಸಹೋದರ "ದುಡಿದು ಹಾಕಿದಷ್ಟು" ಕರ್ನಾಟಕದ ಯಾವ ಕಂದಾಯ ಮಂತ್ರಿಯೂ ದುಡಿದಿಲ್ಲವಂತೆ. ಅದೇ ಸುದ್ದಿ ಕೇಂದ್ರದ ಬಿಜೆಪಿ ನಾಯಕರುಗಳಿಗೆ ತಲುಪಿ ಅವರನ್ನು ಮುಂದಿನ ಸರಕಾರದಲ್ಲಿ ಮಂತ್ರಿ ಮಾಡದಿರುವ ತೀರ್ಮಾನ ಮಾಡಿದ್ದಾರೆಂದು ಕಳೆದ ವರ್ಷ ಕೇಳಿಬಂದಿತ್ತು. ಸದಾ ನಿದ್ದೆಯಿಂದ ಹೊರಬರದಿರುವ ಶೆಟ್ಟರ್ ಮುಖ್ಯಮಂತ್ರಿ ಕ್ಯಾಂಡಿಡೇಟ್ ಎಂದು ಯಾವ ಬಿಜೆಪಿ ಕಾರ್ಯಕರ್ತರೂ ನಂಬುವುದಿಲ್ಲ - ಕೇವಲ ರೆಡ್ಡಿಗಳಿಂದ ಕೃತಾರ್ಥರಾದ ಮಾಧ್ಯಮ ಮಂದಿಗಳಷ್ಟೇ ಅದನ್ನು ಹೇಳುತ್ತಿರುತ್ತಾರಷ್ಟೇ. ಇನ್ನು ರೆಡ್ಡಿಗಳ ಬೆಂಬಲದಿಂದ ಮುಖ್ಯಮಂತ್ರಿಯಾದರೂ ಆ ರೆಡ್ದಿಗಳ ಗಣಿ ಮಣ್ಣಿನ ಧೂಳು ತೆಗೆಯಲು ಕಾರ್ಪೆಟ್ ಆಗಬೇಕಷ್ಟೇ ಎಂದು ತಿಳಿಯದಷ್ಟು ಶೆಟ್ಟರ್ ದಡ್ಡರೇನಲ್ಲ.

ಈ ರೆಡ್ಡಿಗಳು ರಾಜ್ಯದ ಭೂಮಿಯನ್ನು ಲೂಟಿ ಮಾಡಿ ರಾಜ್ಯದ ರಸ್ತೆಗಳನ್ನು, ಬಂದರುಗಳನ್ನು ತಿಂದು ಕುಡಿದಾಗಿದೆ. ವಿಧಾನಸೌಧವಿರುವ ಜಾಗದಲ್ಲಿ ಖನಿಜ ಕಂಡುಬಂದರೆ ಅದನ್ನು ಅಗೆದು ಚೀನಾಕ್ಕೆ ಮಾರಲು ಹೇಸದ ಜನರು ಇವರು. ವರ್ಷಕ್ಕೊಮ್ಮೆ ಸಾಮೂಹಿಕ ವಿವಾಹ, ಸುಷ್ಮಾ ಸ್ವರಾಜ್ ಜೊತೆ ವರಮಹಾಲಕ್ಷ್ಮಿ ಪೂಜೆ ಮಾಡಿದ ಕೂಡಲೇ ರಾಜ್ಯದಲ್ಲಿ ತಮ್ಮ ಮೀರುವ ನಾಯಕರು ಇಲ್ಲ, ತಮ್ಮ ಗುರಿ ಮುಖ್ಯಮಂತ್ರಿ ಖುರ್ಚಿಯೆಂದೆಲ್ಲಾ ಹೇಳಿಸಿಕೊಳ್ಳುವ ಈ ರೆಡ್ಡಿಗಳು ಕರ್ನಾಟಕದ ಜನತೆಯ ತಾಳ್ಮೆ ಪರಿಶೀಲಿಸುತ್ತಿದ್ದಾರೆ.

ಇಷ್ಟೆಲ್ಲಾ ತಮ್ಮ ಕಣ್ಣ ಮುಂದೆಯಿದ್ದರೂ ರೆಡ್ಡಿಗಳು ಹೇಳಿದ್ದೇ ಪಂಚಾಮೃತವೆಂದು ಬರೆಯುವ ದೊಡ್ಡ ಪತ್ರಕರ್ತರ ಗುಂಪೇ ಇದೆ. ಇದೇ ಗುಂಪಿಗೆ ೨೬ MLAಗಳು ೮೦ MLAಗಳಂತೆ ಕಾಣುತ್ತಾರೆ. ಪದೇ ಪದೇ ಯಡ್ಯೂರಪ್ಪನವರ ಬಗ್ಗೆ ಬರೆದದ್ದನ್ನೇ ಬೇರೆ ಬೇರೆ ರೀತಿಯಲ್ಲಿ ಬರೆದು (ಯಡ್ಯೂರಪ್ಪ ಸಿಡುಕ, ಸಹ ಮಂತ್ರಿಗಳ ಜೊತೆ ನಗುವುದಿಲ್ಲ, ಶೋಭಾ show ಇತ್ಯಾದಿ) ತಮ್ಮ ಕಾಲಂಗಳನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಅವರು ಯಡ್ಯೂರಪ್ಪನವರ ಬಗ್ಗೆ ಬರೆಯುವುದೆಲ್ಲಾ ನಿಜವಿರಬಹುದು, ಆದರೆ ಆ ವಿಷಯಗಳನ್ನೆತ್ತಲು ಇದು ಸರಿಯಾದ ಸಮಯವೇ?

ಅತ್ತ ಜಗನ್ ತನ್ನ ತಂದೆ ಹೆಲಿಕಾಪ್ಟರ್ ದುರಂತದಲ್ಲಿ ಮಡಿದು ಬಾಡಿ ಸಿಗುವ ಮೊಡಲೇ ಟಿವಿ ಪತ್ರಿಕೆಗಳಲ್ಲಿ ತನ್ನನ್ನು ಮುಂದಿನ ಮುಖ್ಯಮಂತ್ರಿಯಾಗಿ project ಮಾಡಿಕೊಂಡು ಈಗ ಎಲ್ಲಿದ್ದಾರೆಯೆಂಬುದನ್ನು ಹುಡುಕುವ ಸ್ಥಿತಿ ಬಂದಿದೆ. ಯಾವ ಮಾಧ್ಯಮಗಳು ಪತ್ರಕರ್ತರು ಜಗನ್ ರೆಡ್ಡಿಯನ್ನು ಆಂಧ್ರದ ಮುಖ್ಯಮಂತ್ರಿಯೆಂದು project ಮಾಡಿದರೋ ಅದೇ ಮಾಧ್ಯಮಗಳು ಈಗ ಜಗನ್ ರೆಡ್ಡಿಯನ್ನು ಮೂಸಿ ನೋಡುತ್ತಿಲ್ಲ.

ಮಾಧ್ಯಮಗಳ ಮೂಲಕವೇ ರಾಜಕೀಯ ನಡೆಸಬಹುದು, ಪತ್ರಕರ್ತರನ್ನು ತಮ್ಮ ಎಜೆಂಡಾಗೆ ತಕ್ಕಂತೆ ಬಳಸಿಕೊಳ್ಳಬಹುದು, ಜನರನ್ನು ವರಿಷ್ಠರನ್ನು ತಮ್ಮ ದಾರಿಗೆ ತರಬಹುದು ಎಂದು ರೆಡ್ಡಿಗಳು ಭಾವಿಸಿದ್ದರೆ ಅತ್ತ ಆಂಧ್ರದಲ್ಲಿ ಜಗನ್ ರೆಡ್ಡಿಗಾದ ಪರಿಸ್ಥಿತಿಯನ್ನು ನೋಡಿಯಾದರೂ ಕಲಿಯುವುದೊಳಿತು.

No comments:

Post a Comment