Monday, August 3, 2009

ಛೇ! ಉದಯವಾಣಿ ಈ ಮಟ್ಟಕ್ಕೆ ಇಳಿಯಬಾರದಿತ್ತು!





೭೭೦ ಕೋಟಿಗಳು ಮಾತನಾಡುತ್ತಿವೆಯೇ?
ಛೇ! ಉದಯವಾಣಿ ಈ ಮಟ್ಟಕ್ಕೆ ಇಳಿಯಬಾರದಿತ್ತು!


[UPDATE] Yet another nausceating report today in Udayavani.





ಕಳೆದ ಮೂರು ದಿನಗಳಿಂದ "ಉದಯವಾಣಿ" (ಬೆಂಗಳೂರು ಆವೃತ್ತಿ) ಯಲ್ಲಿ ಗೋವಿಂದರಾಜ ನಗರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣಾರನ್ನು ಹಿಗ್ಗಾಮುಗ್ಗಾ ಹಾಡು ಹೊಗಳಿ ಯಾವುದೇ ಇನ್ಫೋಮರ್ಷಿಯಲ್ಲಿಗೆ ಕಮ್ಮಿಯಿರದಂತೆ ಇರುವ ಸುದ್ದಿಗಳು ಪ್ರಕಟವಾಗುತ್ತಿವೆ.

ಪ್ರಿಯಕೃಷ್ಣಾರನ್ನು ಹೊಗಳುವ ಭರದಲ್ಲಿ ಉದಯವಾಣಿ ಉಪಯೋಗಿಸಿದ ಪದ ಪುಂಜಗಳನ್ನು ನೋಡಿದಾಗ ಈ ಸುದ್ದಿಗಳು ಪ್ರಾಯಷ: ಜಾಹಿರಾತುಗಳಿರಬೇಕೆಂದು ಭಾವಿಸಿದ್ದೆ - ಆದರೆ ಎಲ್ಲೂ ಜಾಹೀರಾತುವೆಂಬ ಡಿಸ್ಕ್ಲೇಮರುಗಳಾಗಲಿ, ಚಿಕ್ಕ ಅಕ್ಷರಗಳಲ್ಲಿ "ಜಾಹೀರಾತು" ಎಂಬ ಅಕ್ಷರಗಳನ್ನು ಕಾಣೆ!



ಈ "ಸುದ್ದಿ"ಗಳು ಎರಡು ದಿನ ಮೊದಲ ಪುಟದಲ್ಲೇ ಬಂದಿವೆಯೆಂಬುದು ಗಮನಾರ್ಹ.



ಚುನಾವಣಾ ದಿನ ಸಮೀಪಿಸಿದಂತೆ ಪತ್ರಿಕೆಗಳು ಕ್ಷೇತ್ರದ ಸಮೀಕ್ಷೆ, ಅಭ್ಯರ್ಥಿಗಳ ಸಂದರ್ಶನ, ಮತದಾರರ ಸಂದರ್ಶನ ಮಾಡಿ ಯಾವುದಾದರು ಅಲೆಯಿದೆಯೋ ಅಥವಾ ಟ್ರೆಂಡಿದೆಯೋವೆಂದು ಬರೆಯುವುದು ಸಹಜ. ಆದರೆ ನಾಮಪತ್ರ ಸಲ್ಲಿಸಿದ ಮರುಗಳಿಗೆಯಲ್ಲೇ, ಚುನಾವಣಾ ಪ್ರಚಾರ ಕಾವೇರದ ಸಮಯದಲ್ಲಿ, ಕಳೆದ ಮೂರು ದಿನಗಳಿಂದ ಮೇಲಿಂದ ಮೇಲೆ ಪ್ರಿಯಕೃಷ್ಣರನ್ನು ಹೊಗಳಿ ಅಟ್ಟಕ್ಕೇರಿಸುವ ವರದಿಗಳು ಬರುತ್ತಿರುವುದು ಸೋಜಿಗದ ಸಂಗತಿ.

ವರದಿಗಳಲ್ಲಿನ ಕೆಲವು ವಾಕ್ಯಗಳನ್ನು ಓದಿದಾಗ ಭಲೇ ಭಲೇ ವರದಿಗಾರವೆನ್ನುವಂತಿದೆ - ಗೋವಿಂದರಾಜ ನಗರದಲ್ಲಿ ಸುಮಾರು ೨.೪ ಲಕ್ಷ ಮತದಾರರಿದ್ದಾರೆ - ಅವರನ್ನೆಲ್ಲಾ "ಉದಯವಾಣಿ"ಯ ವರದಿಗಾರರು ಪರ್ಸನಲ್ಲಾಗಿ ಮೀಟಾಗಿ ಅಭಿಪ್ರಾಯ ಸಂಗ್ರಹಿಸಿದಂತಿದೆ!

ಬನ್ನಿ ನೋಡಿ ಉದಯವಾಣಿಯ ಕೆಲ "ಸುದ್ದಿ" ಸ್ಯಾಂಪಲುಗಳನ್ನು:


ಕ್ಷೇತ್ರದ ಎಲ್ಲೆಡೆ ಪ್ರಿಯಕೃಷ್ಣ ಅವರಿಗೆ ಅದ್ದೂರಿ ಸ್ವಾಗತ ದೊರೆಯುತ್ತಿದ್ದು ಮತದಾರರು ಸ್ವಯಂ
ಸ್ಫೂರ್ತಿಯಿಂದ ಸ್ವಾಗತಕೋರಿ ಆಶೀರ್ವಾದ ಮಾಡುತ್ತಿದ್ದಾರೆ.



ಗೋವಿಂದರಾಜ ನಗರದಲ್ಲಿ ಪ್ರಿಯಕೃಷ್ಣ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಕ್ಷಣದಿಂದಲೇ ಸಂಭ್ರಮಿಸಿದ್ದ ಯುವಕರಂತೂ ತಾವೇ ಚುನಾವಣೆಗೆ ಸ್ಪರ್ಧಿಸಿದಂತೆ ಸೈನಿಕರಂತೆ ಹಗಲಿರುಳು ಪ್ರಿಯಕೃಷ್ಣ ಅವರ ಪರವಾಗಿ ನಿರಂತರ ಪ್ರಚಾರದಲ್ಲಿ ತೊಡಗಿದ್ದಾರೆ. ಯುವಕ-ಯುವತಿಯರು ಮತದಾರರ ಮನೆಬಾಗಿಲಿಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ.



ಕ್ಷೇತ್ರದ ಅಭಿವೃದ್ದಿಗಾಗಿ ಪಣ ತೊಟ್ಟಿರುವ ವಿದ್ಯಾವಂತ ಯುವ ತರುಣ ಪ್ರಿಯಕೃಷ್ಣ ಅವರ ಜನಪರ ಕಾಳಜಿ ಬಗ್ಗೆ ಮತದಾರರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಸೈನಿಕರ ರೀತಿಯಲ್ಲಿ ತಾವೇ ಚುನಾವಣೆಗೆ ಸ್ಪರ್ದಿಸಿರುವಂತೆ ನಿರಂತರವಾಗಿ ಮತದಾರರ ಮನೆಬಾಗಿಲಿಗೆ ತಲುಪುತ್ತಿದ್ದಾರೆ.



(ಅಂದ ಹಾಗೆ ಹೊಗಳುವ ಭರದಲ್ಲಿ ಪದೇ ಪದೇ ಸೈನಿಕರನ್ನು ಉಲ್ಲೇಖ ಮಾಡಿದ್ದು ನೋಡಿದರೆ ವರದಿಗಾರ ಮಾಜಿ ಸೈನಿಕ ಅಥವಾ ಸೈನ್ಯದ backgroundನವರಿರಬೇಕೇನೋ!?)

ಕಳೆದ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಮಾಧ್ಯಮಗಳು, ಪತ್ರಕರ್ತರು ಸಾರಾಸಗಟಾಗಿ ಪಕ್ಷಗಳಿಗೆ ಮಾರಿಕೊಂಡಿದ್ದರೆಂದು ಕೇಳಿದ್ದೆ, ನಮ್ಮಲ್ಲೂ ಸಂಜೆಪತ್ರಿಕೆಗಳಿಗೆ, ಒಂದು ವಾರ ಹುಟ್ಟಿ ಮರುವಾರ ಅದೃಶ್ಯವಾಗುವ ಪೀತ ಪತ್ರಿಕೆಗಳಿಗೆ ಇಂತಹ pay for news culture ಹೊಸದೇನಲ್ಲ.


ಆದರೆ ಪ್ರಾಯಷ: "ಉದಯವಾಣಿ"ಯಂತಹ Main Stream ಪತ್ರಿಕೆಯೊಂದು ಹೀಗೆ ಮಾಡುತ್ತಿರುವುದು ಕರ್ನಾಟಕ ಪತ್ರಿಕೋದ್ಯಮದಲ್ಲೊಂದು ಪ್ರಥಮವೇನೋ? ಟಿ.ಎ.ಪೈ.ಯವರು ಉಡುಪಿ ಲೋಕಸಭೆ ಚುನಾವಣೆಗೆ ನಿಂತಾಗ "ಉದಯವಾಣಿ" ಅವರ ಚುನಾವಣಾ pamphletನಂತೆ ವರದಿ ಮಾಡಿತ್ತು ಎಂದು ಮನೆ ಹಿರಿಯರು ಹೇಳುತ್ತಿದ್ದರು - ಆದರೆ ಅಲ್ಲಿ ತನ್ನ ಧಣಿಯೇ ಚುನಾವಣೆಗೆ ನಿಂತಾಗ ಅವರ ಬೆಂಬಲಕ್ಕೆ ಪತ್ರಿಕೆ ನಿಂತದ್ದು ಸಹಜವೆಂದು ಕ್ಷಮಿಸಬಹುದು - ಆದರೆ "ಉದಯವಾಣಿ" ಬೆಂಗಳೂರು ಆವೃತ್ತಿಗೆ ಪ್ರಿಯಕೃಷ್ಣಾರನ್ನು ಹೀಗೆ ಯದ್ವಾತದ್ವಾ ಬೆಂಬಲಿಸುವ ಯಾವ ಅನಿವಾರ್ಯತೆಯಿದೆಯೆಂದು ಕೇಳ ಬೇಕಾಗುತ್ತದೆ.

ಲೇಯೌಟ್ ಕೃಷ್ಣಪ್ಪ ಮತ್ತು ಅವರ ಮಗ ನಿಜಕ್ಕೂ ಜನಾನುರಾಗಿಗಳಿರಬಹುದು, ಜನಪ್ರಿಯರಿರಬಹುದು. ಆದರೆ ಅವರು ನೂರಾರು ಕೋಟಿಗಳ ಒಡೆಯರೂ ಎಂಬುದನ್ನು ಅಲ್ಲಗೆಳೆಯುವಂತಿಲ್ಲವಲ್ಲ? ಪ್ರಿಯಕೃಷ್ಣ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರ ಪ್ರಕಾರ ಈ ೨೬ ವರುಷದ ಬ್ರಹ್ಮಾಚಾರಿ ೭೭೦ ಕೋಟಿಯ ಒಡೆಯ.



ಗೋವಿಂದರಾಜ ನಗರದಿಂದ ಸ್ಪರ್ಧಿಸಿರುವ ಮಂತ್ರಿ ಸೋಮಣ್ಣನವರೂ ಕೋಟ್ಯಾಧಿಪತಿಯೇ ಮತ್ತು "ಪತ್ರಕರ್ತರನ್ನು ಸಾಕಿಕೊಂಡವರೇ" - ಏನೇ ರಿಬ್ಬನ್ ಕಟ್ ಮಾಡುವ ಸಂಧರ್ಭವಿರಲಿ ಪತ್ರಕರ್ತ ಫೊಟೋಗ್ರಾಫರ್ ಪಡೆಗಳನ್ನು ಕರೆದುಕೊಂಡು ಹೋಗುವುದು ಸೋಮಣ್ಣನವರ ಸ್ಟೈಲ್. ಆದರೆ ಇತ್ತೀಚೆಗೆ ಬೆಂಗಳೂರು ನಗರ ಪಾಲಿಕೆಯ ಇಂಜಿನಿಯರೊಬ್ಬರಿಗೆ ಆಸ್ಪತ್ರೆ ಸೇರುವಂತೆ ಕಪಾಳ ಮೋಕ್ಷ ಮಾಡಿ ಸುದ್ದಿಯಾದ ನಂತರ ಸುದ್ದಿಮನೆಗಳಲ್ಲಿ ಸೋಮಣ್ಣ persona non grata ಆಗಿದ್ದಾರೆ.



ಆದರೂ ಇಂತಹ ಕೋಟ್ಯಾಧಿಪತಿಗಳ ನಡುವಿನ ಕದನ ವರದಿ ಮಾಡಲು ತಾಮುಂದು ನಾಮುಂದು ಎಂದು ಸುದ್ದಿಮನೆಗಳಲ್ಲಿ ಸ್ಪರ್ಧೆ ನಡೆದಿರಬಹುದೇನೋ?

ಏನೇ ಇರಲಿ, "ಉದಯವಾಣಿ"ಯಂತಹ ಪತ್ರಿಕೆ, ಅದರಲ್ಲೂ ಪತ್ರಿಕೋದ್ಯಮದಲ್ಲಿ ಪಳಗಿದ, ಒಳ್ಳೇ ಹೆಸರಿರುವ ಅದರ ಬೆಂಗಳೂರಿನ ಸಂಪಾದಕ ಮಂಡಳಿ ಯಾಕೆ ಪತ್ರಿಕಾ ಧರ್ಮವನ್ನು ಮರೆತು ಇಂತಹ ಕೆಳಮಟ್ಟಕ್ಕಿಳಿಯಿತು ಎಂದು ಕೇಳಲು ವಿಷಾದವಾಗುತ್ತದೆ.

No comments:

Post a Comment