
ಇಂದಿನ (Dec.9) "ವಿಜಯ ಕರ್ನಾಟಕ"ದಲ್ಲಿ ವಿನಾಯಕ ಭಟ್ಟರು ಬರೆದ "ತನಿಖಾ ಆಯೋಗ:ನಿವೃತ್ತರಿಗೆ ಸುಯೋಗ"ದಲ್ಲಿ ನಾನು ಇತ್ತೀಚೆಗೆ ಏನು ಯೋಚಿಸುತ್ತಿದ್ದೇಯೋ ಅದರ ಬಗ್ಗೆಯೇ ಬಹಳ ಚೆನ್ನಾಗಿ ಬರೆದಿದ್ದಾರೆ.
ಲಿಬಾರಾನ್ ಆಯೋಗ ಬಾಬರಿ ಮಸೀದಿ ಧ್ವಂಸ ಕುರಿತು ೧೭ ವರ್ಷಗಳಷ್ಟು ಸುಧೀರ್ಘ ವಿವಾರಣೆಯೆಂಬ ನಾಟಕ ನಟಿಸಿ ಕಡಿದು ಹಾಕಿದ್ದೇನೆಂದು ಇಡೀ ದೇಶ ಕೇಳುತ್ತಿದೆ.
ಪ್ರಾಯಶ: ದೆಹಲಿಯಲ್ಲಿ, ರಾಜ್ಯ ರಾಜಧಾನಿಗಳಲ್ಲಿ ನಮ್ಮ ರಾಜಕಾರಣಿಗಳನ್ನೂ ಮೀರಿಸುವಷ್ಟು ಕೊಬ್ಬಿ ಬೆಳೆದಿರುವವರೆಂದರೆ ಸುಪ್ರೀಂ ಮತ್ತು ಹೈಕೋರ‍್ಟ್ ನ್ಯಾಯಾಧೀಶರು. ನಾನು ಉಡುಪಿಯ ಪಿ.ಪಿ.ಸಿ.ಯಲ್ಲಿ ಓದುತ್ತಿದ್ದಾಗ ಕೃಷ್ಣನ ದರ್ಶನ ಮಾಡಲು ಬರುತ್ತಿದ್ದ ಈ ನ್ಯಾಯಾಧೀಶರ ಧೂಂಧಾಂ ಭೇಟಿ ಯಾವುದೇ ರಾಜಕೀಯ ಪುಢಾರಿಯ ಮೆರವಣಿಗೆಗಿಂತ ಕಮ್ಮಿಯಿರಲಿಲ್ಲ. ೩-೪ (ಸರಕಾರಿ ಗೂಟದ) ಕಾರುಗಳು, ಎದುರು ಹಿಂದೆ ಪೊಲೀಸ್ ಜೀಪುಗಳ ಮೆರವಣಿಗೆ ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದ ನಾವು ಯಾರೋ ದೊಡ್ಡ ಮಂತ್ರಿಗಳು ಬಂದಿದ್ದಾರೆಯೇ ಎಂದು ಮಠದ ಮಾಣಿಗಳನ್ನು ಕೇಳಿದರೆ "ಇಲ್ಲ ಮಾರಾಯ, ಯಾರೋ ಆಂಧ್ರದ, ಸಿಕ್ಕಿಂನ ಹೈಕೋರ‍್ಟ್ ಜಡ್ಜ್" ಅಂತೆಯೋ ಇಲ್ಲಾ ನಿವೃತ್ತ ಸುಪ್ರೀಂ ಕೋರ್ಟ್ ಜಡ್ಜಂತೆಯೆಂದು ಮಾಣಿಗಳು ಉತ್ತರಿಸುತ್ತಿದ್ದರು.
ಒಮ್ಮೊಮ್ಮೆ ನ್ಯಾಯಾಧೀಶರುಗಳು ಸರಕಾರದ ವಿರುದ್ಧ, ಮಂತ್ರಿಗಳ ವಿರುದ್ಧ ಬಾಯಿಗೆ ಬಂದಂತೆ ಬಯ್ಯುವುದುಂಟು - ಅದನ್ನು ನಮ್ಮ ಮಾಧ್ಯಮ ಮಿತ್ರರೂ ಯಥಾವತ್ತಾಗಿ ಹೆಡ್ ಲೈನ್ ಹಾಕುವುದೂ ಉಂಟು (ಇತ್ತೀಚೆಗಿನ ಉದಾಹರಣೆ ವಿಶ್ವೇಶ್ವರ ಹೆಗಡೆಯವರು ಭಾಷಾ ನೀತಿಯ ಬಗ್ಗೆ ಉಗುಳಿಸಿಕೊಂಡದ್ದು). ಈಗ ಭ್ರಷ್ಟಾಚಾರದ ಅರೋಪ ಹೊತ್ತಿರುವ ದಿನಕರನ್ ಕೂಡಾ ಕರ್ನಾಟಕಕ್ಕೆ ಬಂದ ಶುರುವಿನಲ್ಲಿ ಮಾಡಿದ್ದು ಅದನ್ನೇ - ಅದೇನೋ ಇಂಗ್ಲಿಷಿನಲ್ಲಿ "playing for the gallery" ಅಂಥಾರಲ್ಲಾ ಹಾಗೆ. ಅಂದ ಹಾಗೆ ದೂರದ ತಮಿಳುನಾಡಿನ ಮಾಧ್ಯಮ ಮಿತ್ರರು ದಿನಕರನ್ ಆಸ್ತಿ ಬಗ್ಗೆ research ಮಾಡಿದಷ್ಟೂ ಕನ್ನಡದ ಮಾಧ್ಯಮ ಹೀರೋಗಳು ಯಾಕೆ ಮಾಡಿಲ್ಲ? ದಿನಕರನ್ ಕೆಲ ಸೆಕೆಂಡುಗಳ ವಿಚಾರಣೆಯಲ್ಲಿ ಗಣಿಗಳಿಗೆ ಬೇಕಾಬಿಟ್ಟೀ ಪರವಾನಿಗೆ, ಕೊಲೆಗಡುಕರ ಬಿಡುಗಡೆ ಮಾಡಿ ತೀರ್ಪು ಕೊಡುತ್ತಿದ್ದಾಗ ಕನ್ನಡದ ಮಾಧ್ಯಮ ಮಿತ್ರರಿಗೆ corruption ವಾಸನೆ ಯಾಕೆ ಹೊಡೆಯಲಿಲ್ಲ?
ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಷ್ಟು ಗಬ್ಬೆಟ್ಟು ಹೋದ ನ್ಯಾಯಾಂಗ ವ್ಯವಸ್ಥೆ ಬೇರೆ ಯಾವ ದೇಶದಲ್ಲೂ ಇರಲಿಕ್ಕಿಲ್ಲ. ನಮ್ಮ ನ್ಯಾಯಾಧೀಶರು ಎಷ್ಟು ಕೊಬ್ಬಿ ಹೋಗಿದ್ದಾರೆ ಎಂಬುದನ್ನು ತಿಳಿಯಲು ಬೆಂಗಳೂರಿನಲ್ಲಿ ಮಂತ್ರಿಗಳ ಮನೆಗಳನ್ನೂ ನಾಚಿಸುವಂತ್ತಿರುವ ನ್ಯಾಯಾಧೀಶರ official ಬಂಗ್ಲೆಗಳನ್ನು ನೋಡಿ. ಯಡ್ಯೂರಪ್ಪನವರ ಬೆಡ್ ರೂಮಿನ ಬಗ್ಗೆ ಯಾರೋ ಪುಣ್ಯಾತ್ಮ RTI ಹಾಕಿ ವಿವರ ಪಡೆದುಕೊಂಡ - ಆದರೆ ಅದೇ ಕರ್ನಾಟಕ ಹೈಕೋರ್ಟ್ ಜಡ್ಜುಗಳ ಅರಮನೆಯಂತಹ ಸರಕಾರಿ ಬಂಗ್ಲೆಗಳ ಖರ್ಚಿನ ಬಗ್ಗೆ RTI ಹಾಕಲೂ ಅವಕಾಶವಿಲ್ಲದಂತೆ ಈ ನ್ಯಾಯಾಧೀಶರುಗಳು ನೋಡಿಕೊಂಡಿದ್ದಾರೆ - ನ್ಯಾಯಾಧೀಶರುಗಳ ಆಸ್ತಿ ಪಾಸ್ತಿ ವಿವರಣೆ ನೀಡಲು ಇದೇ ಬಿಳಿಯಾನೆಗಳು ಬಯಸುತ್ತಿಲ್ಲ.
ಸರಕಾರೀ ಬಂಗಲೆ, ಆಳು ಕಾಳು, ಹೆಂಡತಿ ಮಕ್ಕಳಿಗೊಂದು ಸರಕಾರೀ ಕಾರು ಬಳಸಿ ಐಷಾರಾಮಿ ಜೀವನ ನಡೆಸುವ ನ್ಯಾಯಾಧೀಶರೆಂಬ ಬಿಳಿಯಾನೆಗಳ ಕೆಲಸದ ಶೈಲಿ ನಮ್ಮ ಕೋರ್ಟುಗಳಲ್ಲಿ ರಾಶಿ ಬಿದ್ದಿರುವ ಕೇಸುಗಳನ್ನು ನೋಡಿದರೆ ಗೊತ್ತಾಗುತ್ತದೆ. ರಾಜಕಾರಣಿಗಳಾದರೋ ಪ್ರತಿ ಐದು ವರ್ಷಕ್ಕೊಮ್ಮೆ ಊರೂರು ತಿರುಗಾಡಿ ಇಲೆಕ್ಷನ್ ಎಂಬ ಪರೀಕ್ಷೆ ಪಾಸಾಗಬೇಕು. ಆದರೆ ಒಮ್ಮೆ ನ್ಯಾಯಾಧೀಶರಾದರೆ ಸಾಕು, ನಿವೃತ್ತಿ ತನಕವೂ ಸರಕಾರೀ ಖರ್ಚಿನಲ್ಲಿ ಮಜಾ ಉಡಾಯಿಸಬಹುದು.
ರಾಜಕಾರಣಿಗಳಾದರೆ ಐದು ವರ್ಷಕ್ಕೊಮ್ಮೆ ಮತದಾರ ಪ್ರಭುವಿಗೆ ಉತ್ತರ ಕೊಡಬೇಕು, ಆದರೆ ನ್ಯಾಯಾಧೀಶರೆಂಬ ಬಿಳಿಯಾನೆಗಳಿಗೆ accountability ಯೇ ಇಲ್ಲ! Stay order issue ಮಾಡುವುದು, ಕೇಸುಗಳನ್ನು ವಿನಾಕಾರಣ adjourn ಮಾಡಿ ಗೋಲ್ಫ್ ಕೋರ್ಸಿನಲ್ಲಿ ಕಾಲಕಳೆಯುವುದನ್ನೇ ತಮ್ಮ ಕೆಲಸವೆಂದು ಈ ಬಿಳಿಯಾನೆಗಳು ತಿಳಿದಂತಿದೆ.
ನಿವೃತ್ತಿಯ ನಂತರ
ಇನ್ನು ನಿವೃತ್ತಿಯ ನಂತರ ಈ ನ್ಯಾಯಾಧೀಶರೆಂಬ ಬಿಳಿಯಾನೆಗಳು ತಮ್ಮ ಮುಂಚಿನ ಗತ್ತು ವೈಭವ ಉಳಿಸಿಕೊಳ್ಳಲು ಯಾವುದಾದರೂ ಸರಕಾರೀ ಹುದ್ದೆ ಪಡೆಯಲು ಮಾಡುವ ಸರ್ಕಸ್ ಯಾವುದೇ ರಾಜಕೀಯ ಪುಢಾರಿಯನ್ನೂ ನಾಚಿಸುವಂತ್ತಿರುತ್ತದೆ. ಮರಿ ಪುಢಾರಿಗಳು ನಿಗಮ ಮಂಡಳಿಯೆಂದೆಲ್ಲಾ ಓಡಾಡಿದರೆ ಈ ನಿವೃತ್ತ ನ್ಯಾಯಾಧೀಶರುಗಳು "ನ್ಯಾಯಾಂಗ ಆಯೋಗ", "ವಿಚಾರಣಾ ಆಯೋಗ", "ಲೋಕಾಯುಕ್ತ", "ಮಾನವ ಹಕ್ಕುಗಳ ಆಯೋಗ"ಗಳೆಂಬ ಗಂಜೀ ಕೇಂದ್ರಗಳಲ್ಲಿ ಆಶ್ರಯ ಪಡೆಯಲು ಅಧಿಕಾರಸ್ಥ ರಾಜಕಾರಣಿಗಳ ಮುಂದೆ ಮಾನ ಮರ್ಯಾದೆ ಎಲ್ಲವನ್ನೂ ಬದಿಗಿಟ್ಟು ಸಾಲಲ್ಲಿ ನಿಂತಿರುತ್ತಾರೆ.


ಲೋಕಾಯುಕ್ತರಾಗಿ ಪ್ರತಿ ನಿತ್ಯವೆಂಬಂತೆ ಪತ್ರಿಕಾ ಹೇಳಿಕೆ ಕೊಡುವುದು, ತಾನು ಬಿಜೆಪಿಯ ದಾಕ್ಷಿಣ್ಯಕ್ಕೆ ಬಿದ್ದಿಲ್ಲವೆಂದು ತೋರಿಸಲು ದಿನಬೆಳಗಾದರೆ ರಾಜ್ಯ ಸರಕಾರವನ್ನು ದೂರುವುದು, ಲೋಕಾಯುಕ್ತಕ್ಕೆ ಸರಕಾರ ಸಿಬ್ಬಂದಿ ಕೊಡುತ್ತಿಲ್ಲವೆಂದೋ, ಲೋಕಾಯುಕ್ತಕ್ಕೆ ಸರಕಾರ power ಕೊಡುತ್ತಿಲ್ಲವೆಂದು ಇದ್ದ ಬಿದ್ದ ಸಭೆ ಸಮಾರಂಭಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಹೇಳಿಕೆ ಕೊಡುವುದನ್ನೇ ಲೋಕಾಯುಕ್ತರ ಕೆಲಸವೆಂದು ಹೆಗ್ಡೆಯವರು ತಿಳಿದಂತಿದೆ. ಇಂತಹ ಪ್ರಭಾವಿ ಹುದ್ದೆಯನ್ನು ನಿವಾರಿಸಲು ಆಗದಿದ್ದರೆ ಬೇರೆ ಯಾವುದೇ ಸೀದಾಸಾದಾ ಜನರು ಯಾವಾಗಲೋ ಒಂದೋ ರಾಜೀನಾಮೆ ಬಿಸಾಕಿ ಹೋಗುತ್ತಿದ್ದರು ಅಥವಾ ಹುದ್ದೆಯಲ್ಲಿದ್ದೇ ಸಾಧ್ಯವಾದಷ್ಟು ಬದಲಾವಣೆ ತರುತ್ತಿದ್ದರು. ಟಿ.ಎನ್.ಶೇಷನ್ ಎಂಬಾ ಮಹಾಪುರುಷ ಒಂದು ಕಾಲದಲ್ಲಿ ಚುನಾವಣಾ ಆಯೋಗವೆಂಬ ಅಕ್ಷರಷ: ಹಲ್ಲಿಲ್ಲದ ಶಿಖಂಡೀ ಆಯೋಗವನ್ನು ಯಾವುದೇ additional power ಯಾ ಕಾನೂನು ಯಾ legislative ಬದಲಾವಣೆಯಿಲ್ಲದೇ ಹೇಗೆ ಸಂಪೂರ್ಣವಾಗಿ ಬದಲಿಸಿದರು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ.
ಸಂತೋಷ್ ಹೆಗ್ಡೆಯವರಿಗೆ ಮನಸ್ಸಿದ್ದರೆ ಈಗಿನ ಲೋಕಾಯುಕ್ತ ಚೌಕ್ಕಟ್ಟಿನಲ್ಲೇ ಬದಲಾವಣೆ ಮಾಡಬಹುದು ಇಲ್ಲಾ ರಾಜೀನಾಮೆ ಬಿಸಾಕಿ ಹೋಗಬಹುದು - ಆದರೆ ದಶಕಗಳಷ್ಟು ಕಾಲ ನ್ಯಾಯಾಧೀಶರಾಗಿ ಸಕಲ ಸರಕಾರೀ ಸೌಲಭ್ಯಗಳನ್ನು ಉಪಯೋಗಿಸಿರುವ ಹೆಗ್ಡೆಯವರು typical Indian judge ನಂತೆ status quo ನಲ್ಲೇ forever ಇರಲು ಬಯಸಿದಂತಿದೆ. ತಾನು ಜೀವವಿದ್ದೇನೆ ಎಂದು ತೋರಿಸಿಕೊಳ್ಳಲು ವಾರಕ್ಕೊಮ್ಮೆ ಸರಕಾರದ ವಿರುದ್ಧ ಕಿಡಿ, ತನಗೆ ಸಂಬಂಧವೇ ಇಲ್ಲದ ವಿಷಯದ ಬಗ್ಗೆ ಕೊರೆಯುವುದು, ತಿಂಗಳಿಗೊಮ್ಮೆ raid ನಲ್ಲೇ ಹೆಗ್ಡೆಯವರು ತೃಪ್ತಿ ಕಂಡಂತಿದೆ. ನಿವೃತ್ತಿಯ ನಂತರವೂ ಸವಲತ್ತು, ಸರಕಾರೀ ಕಾರು, ಆಳು ಕಾಳುಗಳು ಸಿಗುವಾಗ ಯಾರು ಬೇಡ ಹೇಳುತ್ತಾರೆ ಹೇಳಿ?

ಎಲ್ಲಾ ನ್ಯಾಯಾಧೀಶರು ಹೀಗೆಂದು ಹೇಳುತ್ತಿಲ್ಲ. ವಕೀಲರು ಇದಕ್ಕಿಂತ ಇನ್ನೂ ಹಾಳು - ಇತ್ತೀಚೆಗೆ ಹೈಕೋರ್ಟಿನಲ್ಲಿ ನಡೆದ ಹೊಯ್ ಕೈ ಗಲಭೆಯೇ ವಕೀಲರ ಸಾಚಾತನವನ್ನು ಬಯಲು ಮಾಡಿದೆ. ತಾಲೂಕು ಮಟ್ಟದಲ್ಲೂ ರಾಶಿ ರಾಶಿ ಬಿದ್ದಿರುವ ಕೋರ್ಟು ಕೇಸುಗಳನ್ನು ಕಂಡಾಗ ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯೇ ಹೇಸಿಕೆಯಾಗುತ್ತದೆ. ನ್ಯಾಯಾಂಗ ನಿಂದನೆಗೆ ಹೆದರಿ ಮಾಧ್ಯಮಗಳೂ ಜನರೂ ಸುಮ್ಮನ್ನಿದ್ದಾರೆ. The Emperor has no clothes ಎಂದು ಹೇಳಲು ಜನರೀಗ ಹೆದರಬಹುದು. ಆದರೆ ದಿನಕರನ್ ಪ್ರಕರಣದಲ್ಲಿ ನೋಡಿದಂತೆ ಜನರ ಸಹನೆಯ ಕಟ್ಟೆಒಡೆಯುವ ಕಾಲ ದೂರವಿಲ್ಲ. ನ್ಯಾಯಾಂಗ ನಿಂದನೆ ಎಂಬ ಗುಮ್ಮವನ್ನು ಎದುರಿಟ್ಟುಕೊಂಡು ತಾವು ಏನಾದರೂ ಮಾಡಬಹುದು, ಕಣ್ಣೂ ಮುಚ್ಚಿ ಭ್ರಷ್ಟಾಚಾರ ಮಾಡಬಹುದು, ತಾವು ಯಾರಿಗೂ accountable ಅಲ್ಲವೆಂದು ಬೀಗುವ ನ್ಯಾಯಾಧೀಶರು ಜನರ ತಾಳ್ಮೆಗೂ ಮಿತಿಯಿದೆಯೆಂಬುದನ್ನು ಅರಿಯಬೇಕಾಗಿದೆ.
Wonderful article!
ReplyDeletesuperb..Rakesh
ReplyDeletehttp://www.daijiworld.com/news/news_disp.asp?n_id=70028
ReplyDelete