Friday, August 19, 2011

ಲೋಕಾಯುಕ್ತ ವರದಿ ಬಯಲು ಮಾಡಿದ ಗಣಿ ರಹಸ್ಯ: ಆರ್.ಬಿ:೧೦ ಲಕ್ಷ, ವಿ.ಭಟ್: ೨೫ ಲಕ್ಷ, ಬೆಂಗಳೂರು ಮಿರರ್, Deccan Chronicle, Press Club: 5 ಲಕ್ಷ

ಲೋಕಾಯುಕ್ತ ವರದಿ ಬಯಲು ಮಾಡಿದ ಗಣಿ ರಹಸ್ಯ: ಆರ್.ಬಿ:೧೦ ಲಕ್ಷ, ವಿ.ಭಟ್: ೨೫ ಲಕ್ಷ, ಬೆಂಗಳೂರು ಮಿರರ್, Deccan Chronicle, Press Club: 5 ಲಕ್ಷ


First of all "ಪ್ರಜಾವಾಣಿ"ಗೆ ಭೇಷ್ ಅನ್ನಬೇಕಾಗಿದೆ. ಲೋಕಾಯುಕ್ತ ವರದಿ ಎಲ್ಲಾ ಮಾಧ್ಯಮಗಳಿಗೂ ಲಭ್ಯವಾಗಿದ್ದರೂ, "ಪ್ರಜಾವಾಣಿ’ಯೊಂದೇ systematic ಆಗಿ ವರದಿಯನ್ನು ಅವಲೋಕಿಸಿ ಎಳೆ ಎಳೆಯಾಗಿ ಅನಾವರಣ ಮಾಡುತ್ತಿದೆ.

ಹಿಂದೊಮ್ಮೆ ಈ ಬ್ಲಾಗಲ್ಲಿ ಗಣಿ ರೆಡ್ಡಿಗಳ ಎಂಜಲುಂಡಿರುವ ಪತ್ರಕರ್ತರ ಬಗ್ಗೆ ಬರೆದಿದ್ದೆ. ನೋಡಿ "ರೆಡ್ಡಿಗಳ ಕಪಿ ಮುಷ್ಠಿಯಿಂದ ಕರ್ನಾಟಕಕ್ಕೆ ಮುಕ್ತಿಯೆಂದು?ಮಾಧ್ಯಮಗಳಲ್ಲಿ ನಡೆಯುತ್ತಿರುವ ಭಿನ್ನಮತ - ರೆಡ್ಡಿಗಳ ಮುಷ್ಠಿಯಲ್ಲಿ ಕರ್ನಾಟಕದ ಮಾಧ್ಯಮ ಮಿತ್ರರು". ಅದೆಲ್ಲಾ ಇಂದು ನಿಜವಾಗಿದೆ.

ಇಂದಿನ "ಪ್ರಜಾವಾಣಿ" ನೋಡಿ:

  • ಆರ್.ಬಿ. (ರವಿ?) - ರೂ ೧೦ ಲಕ್ಷ
  • ವಿ.ಭಟ್ (ವಿಶ್ವೇಶ್ವರ?) - ರೂ ೨೫ ಲಕ್ಷ ಮತ್ತು 50 ಲಕ್ಷ (ಪ್ರಾಯಶ: ಇದರಲ್ಲೇ ಹೊಸ ಮನೆ ಕಟ್ಟಿದರೇನೋ?)
  • ಬೆಂಗಳೂರು ಮಿರರ್ - ರೂ ೫ ಲಕ್ಷ
  • ಡೆಕ್ಕನ್ ಕ್ರೋನಿಕಲ್ - ರೂ ೨೫ ಲಕ್ಷ
  • ಪ್ರೆಸ್ ಕ್ಲಬ್ - ೫ ಲಕ್ಷ
ಹೀಗೆ ಕಳ್ಳೇಪುರಿ ಹಂಚಿದಂತೆ ಪತ್ರಕರ್ತರಿಗೆ ಗಣಿ ರೆಡ್ಡಿಗಳು ಹಣ ಹಂಚಿದ್ದಾರೆ. ಇನ್ನು ಪ್ರೆಸ್ ಕ್ಲಬ್ ಗಳಿಗೂ ಲಕ್ಷಗಟ್ಟಳೆ ಹಂಚಿದ್ದಾರೆ. ಇದನ್ನೆಲ್ಲಾ ನೋಡಿದಾಗ ಗಣಿ ದೊರೆಗಳ ಪರವಾಗಿ direct ಅಥವಾ indirect ಆಗಿ ಬೆಂಬಲಿಸುವ ಪತ್ರಕರ್ತರಿರುವುದು ಆಶ್ಚರ್ಯದ ಸಂಗತಿಯೇ ಅಲ್ಲ.

ಭಾರೀ ಸಜ್ಜನರಂತೆ ಅಣ್ಣಾ ಹಜಾರೆ ಹೋರಾಟಕ್ಕೆ ಏಕ್ ದಂ ಪ್ರಚಾರ ಕೊಡುವ ಇದೇ ಪತ್ರಕರ್ತರು ಅತ್ತ ಗಣಿ ದೊರೆಗಳ ಎಂಜಲನ್ನೂ ಯಾವುದೇ ನಾಚಿಕೆಯಿಲ್ಲದೆ ಬಾಚಿಕೊಂಡದನ್ನು ನೋಡುವಾಗ ಅಸಹ್ಯವಾಗುತ್ತದೆ.

ಈ ದರಿದ್ರ side business ಪತ್ರಕರ್ತರಿಗೂ ಯಡ್ಯೂರಪ್ಪನವರಿಗೂ difference ಏನು?

Friday, August 5, 2011

ಎಸ್.ಎಂ.ಕೃಷ್ಣರ ಅಚಾತುರ್ಯಗಳ ಸುದ್ದಿ ಕನ್ನಡ ಮಾಧ್ಯಮದಲ್ಲೇಕಿಲ್ಲ?


ವಿಶ್ವಸಂಸ್ಥೆಯಲ್ಲಿ ಪೋರ್ಚುಗಲ್ಲಿನ ಸಚಿವರ ಭಾಷಣವನ್ನು ಹಲವು ನಿಮಿಷಗಳ ಕಾಲ ಶಾಲಾ ಬಾಲಕನಂತೆ ಎಸ್.ಎಂ.ಕೃಷ್ಣರವರು ಓದಿ ಪೇಚಿಗೀಡಾಗಿದ್ದು ಹಳೆ ಸುದ್ದಿ.

ನಿನ್ನೆ ಲೋಕಸಭೆಯಲ್ಲೂ ಹೀಗೇ ಆಯಿತು. ಲೋಕಸಭಾ ಸದಸ್ಯರು ಕೇಳಿದ ಪ್ರಶ್ನೆಗೆ ಎಸ್.ಎಂ.ಕೃಷ್ಣ ತಡಕಾಡಿ ಉತ್ತರ ಹುಡುಕಲು ಒದ್ದಾಡಿದ್ದು ಬರೋಬ್ಬರಿ ಕೆಲ ನಿಮಿಷಗಳು. [Read: "S.M.Krishna caught in sticky situation in Lok Sabha"]

ಲೋಕಸಭಾ ಅಧ್ಯಕ್ಷರೇ ಕಡೆಗೆ ’ಬಿಟ್ಬುಡಿ ಸ್ವಾಮೀ. Answer has been tabled ಅಂಥ ಹೇಳ್ಬುಡಿ" ಎಂದು ಹೇಳಬೇಕಾಯಿತು. ಈ ಘಟನೆಯನ್ನು PTI "Foreign minister appeared absent minded" ಎಂದು ವರದಿ ಮಾಡಿತು.

ಈಗ ಬಂದಿರುವ ಸುದ್ದಿ ಪ್ರಕಾರ ಕೃಷ್ಣ ಅವರು PTIಗೆ ತನ್ನನ್ನು Absent minded ಎಂದು ಕರೆದಿದ್ದಕ್ಕೆ ಲಾಯರ್ ನೋಟಿಸ್ ಕಳಿಸಿದ್ದಾರೆ. [Read: "S.M.Krishna serves legal notice to PTI for calling him absent minded"]

ಇನ್ನು ರಾಜ್ಯಸಭೆಯಲ್ಲೂ ಕೃಷ್ಣರ ದಿನ ಸರಿಯಾಗಿದ್ದಂತಿಲ್ಲ. The Telegraph ವರದಿ ಪ್ರಕಾರ ಕೃಷ್ಣರವರು ಪದೇ ಪದೇ lost ಆದಾಗ ಮುಜುಗರ ತಪ್ಪಿಸಿದ್ಧು ಸ್ವತ: ಮನಮೋಹನ ಸಿಂಗ್ ಮತ್ತು ಚಿದಂಬರಂ. [Read: Manmohan and Team bails Krishna]

ಕೃಷ್ಣರವರಿಗೀಗ ೮೦ ವರ್ಷ. ಲೋಕಸಭೆ, ರಾಜ್ಯಸಭೆಯಲ್ಲಿ ಗುಮಾಸ್ತರು ಬರೆದು ಕೊಟ್ಟದ್ದನ್ನೇ ಓದಲು ಸಾಧ್ಯವಾಗದ ಕೃಷ್ಣರು ವಿದೇಶೀ ನಾಯಕರೊಂದಿಗೆ ಅಣು ಒಪ್ಪಂದ ಮತ್ತಿತರ ಮಹತ್ವಪೂರ್ಣ ವಿಷಯಗಳಲ್ಲಿ ಹೇಗೆ ಮತ್ತು ಯಾವ ರೀತಿ ವ್ಯವರಿಸುತ್ತಾರೆಂದು ಎಣಿಸಿದರೇ ಭಯವಾಗುತ್ತದೆ. ಇನ್ನು ಕೃಷ್ಣರವರ ಸೆಕೆರೆಟರಿ ರಾಘವೇಂದ್ರ ಶಾಸ್ತ್ರಿ ಮಾಡುತ್ತಿರುವ ಗೋಲ್ ಮಾಲುಗಳನ್ನು ಈಗಾಗಲೇ english ಮಾಧ್ಯಮಗಳು ವರದಿ ಮಾಡಿವೆ.

ದೇಶದ ಎಲ್ಲಾ ಪತ್ರಿಕೆಗಳಲ್ಲಿ ಬಂದ ಈ ವರದಿಗಳನ್ನು ನೋಡಿದ ನನಗೆ ಆಶ್ಚರ್ಯವಾದದೆಂದರೆ ಕನ್ನಡ ಮಾಧ್ಯಮಗಳಲ್ಲಿ ಅಥವಾ ಬ್ಲಾಗುಗಳಲ್ಲಿ ಮೇಲಾವುದೇ ಸುದ್ದಿ ವರದಿಯಾಗಲೇ ಇಲ್ಲ. ಕನ್ನಡಿಗ ಸಚಿವ ಎಂಬ ಮಮತೆಯೇ? ಅಥವಾ ಅವರ ಕಾಲದಲ್ಲಿ BDA site gift ಪಡೆದುಕೊಂಡ ಬೆಂಗಳೂರಿನ ಪತ್ರಕರ್ತರು, ಸಂಪಾದಕರು ಇನ್ನೂ ಅದರ ಋಣ ತೀರಿಸುತ್ತಿದ್ದಾರೆಯೇ?

ಕನ್ನಡಿಗರ ಮಾನಮರ್ಯಾದೆಯನ್ನು ಅಂತರಾಷ್ಟ್ರ‍ೀಯ ಮಟ್ಟದಲ್ಲಿ ಕಳೆಯುತ್ತಿರುವ ಕೃಷ್ಣ "ರಾಜ್ಯ ರಾಜಕೀಯವನ್ನು ಬಚಾಚ್ ಮಾಡಲು ಕೃಷ್ಣರಿಂದ ಮಾತ್ರ ಸಾಧ್ಯ", "ರಾಜ್ಯ ರಾಜಕೀಯಕ್ಕೆ ವಾಪಾಸಾಗಬೇಕು", ’ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಬೇಕು" ಎಂದು ಇನ್ನೂ ಬರೆಯುತ್ತಿರುವ ದೊಡ್ಡ ಪತ್ರಕರ್ತರ ಗುಂಪೇ ಇನ್ನೂ ಕನ್ನಡ ಮಾಧ್ಯಮ ಲೋಕದಲ್ಲಿರುವುದು ಕನ್ನಡ ಮಾಧ್ಯಮ ಲೋಕ ಎಷ್ಟು ದಿವಾಳಿಯೆದ್ದು ಹೋಗಿದೆಯೆಂಬುದರ ಸಂಕೇತವಲ್ಲದೆ ಮತ್ತೇನು?

Friday, July 22, 2011

ತಮ್ಮ ಕೆಲಸ ಸರಿಯಾಗಿ ಮಾಡದ ಲೋಕಾಯುಕ್ತರು ಊರಿಗೆಲ್ಲಾ ಉಪದೇಶ ಮಾಡುವುದು ಯಾಕೆ?


"Live by media, die by media" - ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಟಿ.ವಿ. ತೆರೆಯಲ್ಲಿ ಗಳಗಳ ಅಳುತ್ತಿರುವಾಗ ಅನಿಸಿದ್ದು ಹಾಗೆ.

ಈ ಬ್ಲಾಗಿನಲ್ಲಿ ಸಂತೋಷ್ ಹೆಗ್ಡೆಯವರ ಪ್ರಚಾರಪ್ರಿಯ ಪ್ರವೃತ್ತಿ ಬಗ್ಗೆ ಹಿಂದೊಮ್ಮೆ ನಾನು ಬರೆದಾಗ) ಅದೆಷ್ಟೋ ಮಂದಿ ಹೀಯಾಳಿಸಿ email ಕಳಿಸಿದ್ದರು. ನಿವೃತ್ತಿ ನಂತರವೂ ಯಾವುದೋ ಆಯೋಗಗಳಲ್ಲಿ, ಲೋಕಾಯುಕ್ತ ಹುದ್ದೆಗಳಲ್ಲಿ ತಮ್ಮ ಗತ ದಿನದ ಸೌಕರ್ಯ, ಗತ್ತನ್ನು ಪುನ: ಪಡೆಯುವ ನಿವೃತ್ತ ನ್ಯಾಯಾಧೀಶರ ದೊಡ್ಡ ಗುಂಪೇ ಈ ದೇಶದಲ್ಲಿದೆ. ಅಂತಹವರ ಸಾಲಿಗೆ ಜ| ಸಂತೋಷ ಹೆಗ್ಡೆಯವರೂ ಒಬ್ಬರು ಎಂದು ನಾನು ಆಗ ಬರೆದದ್ದು ಈಗ ನಿಜವಾಗಿದೆ.

ಯಾವುದೇ ಕೆಲಸದಲ್ಲಿ professionalism ಎಂದಿರುತ್ತದೆ. ಈ ಲೋಕಾಯುಕ್ತ ಹುದ್ದೆಯೇ ನೋಡಿ - ತಾನು charge ತೆಗೆದುಕೊಂಡ ದಿನದಿಂದಲೂ ಪತ್ರಿಕಾಗೋಷ್ಠಿ, ಕೆಮರಾ ಮುಂದೆ ಸಂತೋಷ ಹೆಗ್ಡೆಯವರು ಮೆರೆಯವುದರಲ್ಲಿ ಕಾಲ ಕಳೆದರಲ್ಲಬೇ, ಪುಡಿ ೫೦೦ / ೧೦೦೦ ರೂ ಲಂಚ ತೆಗೆದುಕೊಳ್ಳುವವರನ್ನು ಹಿಡಿಯುವಲ್ಲಿ ತೋರಿದ ಪೌರುಷವನ್ನು ದೊಡ್ಡ ಹೆಗ್ಗಣಗಳನ್ನು ಹಿಡಿಯುವುದರಲ್ಲಿ ತೋರಿಸಲೇ ಇಲ್ಲ. ಅದು ಬಯಲು ಮಾಡುತ್ತೇನೆ, ಇದು ಬಯಲು ಮಾಡುತ್ತೇನೆಯೆಂದು ಹೇಳುವುದರಲ್ಲಿ ಕಾಲ ಕಳೆದರೇ ಹೊರತು ಬೇರೇನು ಸಾಧಿಸಿದ್ದಾರೆ ಎಂದು ಪ್ರಶ್ನಿಸಬೇಕಾಗುತ್ತದೆ.

ಲೋಕಾಯುಕ್ತರಾಗಿರುವಾಗಲೇ ಅತ್ತ ದೆಹಲಿಯಲ್ಲಿ civic societyಯೆಂಬ ಕೈಲಾಗದ media savvy retireeಗಳ ಜೊತೆ ಮೆರೆದು ಇವರು ಸಾಧಿಸಿದ್ದೇನು? ತಮಗೆ ಎಲ್ಲಾ power, ಸರಕಾರೀ ಸೌಲಭ್ಯ, ಜನರ goodwill ಇದ್ದರೂ ಒಂದು ಸರಿಯಾಗಿ confidential ವರದಿ ತಯಾರು ಮಾಡಲು ಸಾಧ್ಯವಾಗದ ಇವರಿಗೆ ರಾಜಕಾರಣಿಗಳ ವಿರುದ್ಧ ಕಾರಲು ನೈತಿಕ ಅರ್ಹತೆ ಇದೆಯೇ? ರಾಜಕಾರಣಿಗಳಿಗಾದರೋ ಜನರ ಮುಂದೆ ಹೋಗಲು ಚಲಾವಣೆಯಲ್ಲಿರಬೇಕಾಗುತ್ತದೆ - ಆದರೆ ಸಂವಿಧಾನ ಬದ್ಧ ಸಂಸ್ಥೆಯ ಮುಖ್ಯಸ್ಥರೋರ್ವರು ಯಕ:ಶ್ಚಿತ್ ರಾಜಕಾರಣಿಯಂತೆ mediaದಲ್ಲಿ hero ಆಗಲು ಹೋಗಿ ಸೋತಿದ್ದಾರೆ.

ಸಂತೋಷ್ ಹೆಗ್ಡೆಯವರು ಟಿ.ವಿ. ಕೆಮರಾಗಳ ಮುಂದೆ ಪೋಸ್ ಕೊಟ್ಟು ಹಾಳು ಮಾಡಿದ ೧೦% ಸಮಯವನ್ನು ತಮ್ಮ ವರದಿಯನ್ನು ಗೌಪ್ಯವಾಗಿ ತಯಾರಿಸಲು ವ್ಯಯ ಮಾಡಿದರೆ ಸಾಕಿತ್ತು. ಅದು ಬಿಟ್ಟು ಪ್ರತೀ ದಿನ ಟಿವಿ ಕೆಮರಾಗಳ ಮುಂದೆ, ದೆಹಲಿ civic society ಯೆಂಬ ಜೋಕರುಗಳ ಜೊತೆ time waste ಮಾಡಿದ ಇವರು (ದೆಹಲಿಯಲ್ಲೂ ಇವರು ಸಾಧಿಸಿದ್ದೇನೂ ಇಲ್ಲ) ಈಗ ಅದೇ ಟಿವಿ ಚಾನೆಲ್ಲುಗಳಲ್ಲಿ ತಮ್ಮ ವರದಿ ಲೀಕಾದದನ್ನು ನೋಡಿ ಕಣ್ಣೀರು ಹಾಕುತ್ತಿರುವುದು ವಿಪರ್ಯಾಸ!

ಸರಕಾರಗಳ ವಿರುದ್ಧ, ರಾಜಕಾರಣಿಗಳ ವಿರುದ್ಧ ಪ್ರತಿದಿನವೆಂಬಂತೆ ಹೋದಲ್ಲಿ ಬಂದಲ್ಲಿ ಭಾಷಣ ಮಾಡಿದ ಸಂತೋಷ ಹೆಗ್ಡೆಯವರು ಎಲ್ಲಾ ಸರಕಾರಗಳು, ರಾಜಕಾರಣಿಗಳು ಅಪ್ರಯೋಜಕರು ಎಂಬ ಭಾವನೆ ಯುವಜನರಲ್ಲಿ ಮೂಡುವಲ್ಲಿ ಯಶಸ್ವಿಯಾಗಿದ್ದರು - ಆದರೆ ಈಗ? ಒಂದು ಯಕ:ಶ್ಚಿತ್ ವರದಿಯ confidentiality maintain ಮಾಡಲೂ ಇವರ ಕೈಲಾಗಲಿಲ್ಲ ಯಾಕೆ? ದೇಶದ ಎಲ್ಲಾ ಸಮಸ್ಯೆಗಳಿಗೆ ರಾಜಕಾರಣಿಗಳು ಕಾರಣ ಎಂದು ಒಂಥರಾ ಜನಪ್ರಿಯ populism ಅಥವಾ playing to the gallery ಅಂಥಾರಲ್ಲ - ಅದನ್ನು ಮಾಡಲು ಹೋಗಿ ತನ್ನ ಕೆಲಸ ಸರಿ ಮಾಡದೆ ಈಗ ಅತ್ತರೆ ಏನು ಪ್ರಯೋಜನ?

Sunday, June 19, 2011

ಇಂಟರನೆಟ್ಟಿನ ಕನ್ನಡ ತಾಲಿಬಾನಿಗಳು


ಕಳೆದ ವಾರ ಯಾರೋ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತೀಯ ತನ್ನ ಫೇಸ್ ಬುಕ್ಕಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಮಂತ್ರಿ ಚಂದ್ರು ಅವರ "ಕನ್ನಡೇತರರು ಕನ್ನಡ ಕಲಿಯಲೇಬೇಕು" ಎಂಬ ಹೇಳಿಕೆಯನ್ನು ತೆಗಳಿದ್ದನ್ನೇ ಆಕಾಶ ಬೀಳುತ್ತಿದೆಯೆಂದು ಪ್ರತಿಕ್ರಿಯಿಸಿದ ಕೆಲ ಕೆಲಸವಿಲ್ಲದ ಬ್ಲಾಗರುಗಳು ಈಗ ಆ ವ್ಯಕ್ತಿಗೆ ಜೀವ ಬೆದರಿಕೆ ಹಾಕುವಷ್ಟು ಮುಂದುವರಿದಿರುವುದು ಪ್ರಜ್ಣಾವಂತ ಕನ್ನಡಿಗರಿಗೆಲ್ಲಾ ಕಳಂಕ ತರುವಂತಹ ಸುದ್ದಿ.

ಕೆಲಸವಿಲ್ಲದೆ ಕಚೇರಿಯಲ್ಲಿ ಬೆಂಚಿನಲ್ಲಿರುವ ಕನ್ನಡ ಸಾಪ್ಟವೇರ್ ಇಂಜಿನಿಯರುಗಳು, ಕೊಲ್ಲಿ ರಾಷ್ಟ್ರಗಳಲ್ಲಿ ವೇಳೆ ಕಳೆಯುವುದು ಹೇಗೆ ಎಂದು ಗೊತ್ತಿಲ್ಲದ ಆಯಿಲ್ ಕಂಪೆನಿ ಕೆಲಸಗಾರರು ಇಂಟರನೆಟ್ಟು browse ಮಾಡುತ್ತಾ ಯಾರು ಕನ್ನಡದ ವಿರುದ್ದ ಸೊಲ್ಲೆತ್ತುತ್ತಾರೆಯೆಂಬುದನ್ನೇ ಕಾಯುತ್ತಾ ಕುಳಿತಿರುವಂತಿದೆ. ಅತ್ತ ಬೀದಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪುಂಡರು ಕನ್ನಡದ ಹೆಸರಲ್ಲಿ ರೋಲ್ ಕಾಲ್ ಉದ್ದಿಮೆ ನಡೆಸುತ್ತಿರುವಂತೆ, ಇತ್ತ ಇಂಟರನೆಟ್ಟಿನಲ್ಲಿ ಅಬ್ಬೇಪಾರಿಗಳಂತೆ ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತಿರುವ ಐಟಿ ಬಿಟಿಗಳು, wannabe ಪತ್ರಕರ್ತ ನಿರುದ್ಯೋಗಿಗಳು ಕನ್ನಡೇತರರ ವಿರುದ್ದ ಅಂತರ್ಜಾಲದಲ್ಲಿ ಮತ್ತೀಗ ದೂರವಾಣಿಯಲ್ಲಿ ಬೆದರಿಕೆ ಹಾಕುವಷ್ಟು ಮುಂದಿರುವುದು ಯಾವ ಕನ್ನಡ ಪ್ರೇಮವೆಂಬುದು ಅರ್ಥವಾಗುತ್ತಿಲ್ಲ.

ಈ ಇಂಟರನೆಟ್ಟು ಹೀರೋಗಳ "ಬೆಂಗಳೂರಲ್ಲಿ ಬದುಕಬೇಕಾದರೆ ಕನ್ನಡ ಕಲಿಯಲೇಬೇಕು" ಎಂಬ ವಾದವಾದರೂ logical ಅಥವಾ ಸಂವಿಧಾನ ಬದ್ಧವಾಗಿದೆಯೇ?

ಉತ್ತರ ಭಾರತೀಯನ ವಿರುದ್ದ ಅಂತರ್ಜಾಲದಲ್ಲಿ ಹಿಗ್ಗಾಮುಗ್ಗ ಬರೆದ ಅರಬ್ ರಾಷ್ಟ್ರದ ದೋಹಾ ಕತಾರಿನಲ್ಲಿ ಕುಳಿತಿರುವ ಪ.ರಾಮಚಂದ್ರ (ಖ್ಯಾತ ಪತ್ರಕರ್ತ ಪ.ಗೋಪಾಲಕೃಷ್ಣ ಅವರ ಸುಪುತ್ರ) "ಸಂಪಾದಕೀಯ" ಎಂಬ ಬ್ಲಾಗಿನಲ್ಲಿ ಹೇಗೆ ತಾನು ರಾಬಿನ್ ಚುಗ್ಗಿಗೆ ಫೋನ್ ಇಮೇಲ್ ಮಾಡಿದೆಯೆಂದು ಭಾರೀ ಹೀರೋ ತರಹ ಪೋಸ್ ಕೊಟ್ಟಿದ್ದಾರೆ. ತಾನು ಸ್ವತ: ಅರಬ್ ದೇಶದಲ್ಲಿ ಹಲವಾರು ವರ್ಷಗಳಿಂದ ಬದುಕುತ್ತಿರುವ ಇವರು ಅಲ್ಲಿನ ಸ್ಥಳೀಯ ಭಾಷೆ ಅರೇಬಿಕ್ ಕಲಿತಿದ್ದಾರೆಯೇ? ಮಕ್ಕಳಿಗೆ ಅರೇಬಿಕ್ ಕಲಿಸುತ್ತಿದ್ದಾರೆಯೇ (ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರೆಲ್ಲರು ತಮ್ಮ ಮಕ್ಕಳನ್ನು ಕಳಿಸುವುದು CBSE syllabus "ಇಂಡಿಯನ್ ಸ್ಕೂಲುಗಳಿಗೆ ಅಥವಾ ಅಮೆರಿಕನ್ ಸ್ಕೂಲುಗಳಿಗೆ - ಎಲ್ಲೂ ಅರೇಬಿಕ್ ಕಲಿಸುವುದಿಲ್ಲ) ಎಂದು ಪ್ರಶ್ನಿಸಬೇಕಾಗುತ್ತದೆ.

ಇತ್ತ ಇಂಟರನೆಟ್ಟಿನಲ್ಲಿ ಕನ್ನಡ ಪರ ಬೊಬ್ಬೆ ಹಾಕುವ ಐಟಿ ಬಿಟಿ ಅಥವಾ ಕನ್ನಡ ಪತ್ರಕರ್ತರು ಎಷ್ಟು ಜನ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿದ್ದಾರೆ? ತಾವೇ ಎಲ್ಲೋ ಪರ ರಾಷ್ಟ್ರಗಳಲ್ಲಿ ಸ್ಠಳೀಯ ಭಾಷೆ ಕಲಿಯದೆ ಜೀತದಾಳುಗಳಾಗಿ ಬದುಕುತ್ತಿರುವ ಈ NRIಗಳಿಗೆ ಕನ್ನಡೇತರರು ಕನ್ನಡ ಕಲಿಯಲೇಬೇಕೆಂಬ ಹಠವಾದರೂ ಏಕೆ?

ಹೀಗೆ ಗಾಜಿನ ಮನೆಯಲ್ಲಿ ಕುಳಿತಿರುವವರು ಯಾವನೋ ರಾಬಿನ್ ಚುಗ್ ನ ಕಂಪೆನಿ ಹೆಸರನ್ನು ಬ್ಲಾಗುಗಳಲ್ಲಿ ಹಾಕುವುದು, ಅವನಿಗೆ ಫೋನ್ ಮಾಡಿ ಜೀವ ಬೆದರಿಕೆ ಹಾಕುವುದು, ಅವನ ಕಂಪೆನಿ HRಗೆ ಫೋನ್ ಮಾಡಿ ಅವನನ್ನು ಕೆಲಸದಿಂದ ತೆಗೆಯುವಂತೆ ಒತ್ತಾಯ ಮಾಡುವುದು - ಇದು ಯಾವ ಕನ್ನಡ ಪ್ರೇಮ ಸ್ವಾಮೀ?

ನಾಳೆ ಮಂಗಳೂರು, ಉಡುಪಿಯವರು "ಹೊರಗಿನವರು ಇಲ್ಲಿ ಬದುಕಬೇಕಾದರೆ ತುಳು/ಕೊಂಕಣಿಯನ್ನು ಒಂದು ವರ್ಷದೊಳಗೆ ಕಲಿಯುವುದು ಕಡ್ಡಾಯ" ಎಂದು ಚಳುವಳಿ ಮಾಡಿದರೆ ಉಗ್ರ ಕನ್ನಡ ಓರಾಟಗಾರರು ಏನ್ನೆನ್ನುತ್ತಾರೋ?

ಹೇಳೀ ಕೇಳೀ ಮುಖ್ಯಮಂತ್ರಿ ಚಂದ್ರು ಒಬ್ಬ ರಾಜಕಾರಣಿ - populist ಹೇಳಿಕೆಗಳನ್ನು ನೀಡುವ ಸಂವಿಧಾನಬದ್ಧವಲ್ಲದ "ಕನ್ನಡ ಅಭಿವೃದ್ದಿ ಪ್ರಾಧಿಕಾರ"ವೆಂಬ ಹಲ್ಲಿಲ್ಲದ ಸಂಸ್ಠೆಯ ಅಧ್ಯಕ್ಷ. ಸದಾ ಸುದ್ದಿಯಲ್ಲಿರಲು ಇಂತಹ ಹೇಳಿಕೆಗಳನ್ನು (ಒಂಥರಾ ಹೇಳಿಕೆಗಳಲ್ಲೇ ಹೀರೋ ಆಗುತ್ತಿರುವ ಲೋಕಾಯುಕ್ತ ಸಂತೋಷ ಹೆಗ್ಡೆಯವರಂತೆ!) ನೀಡುತ್ತಿರುವುದು ಅನಿವಾರ್ಯ. ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇಂತಹ ತುಘಲಕ್ ಯೋಜನೆಗಳನ್ನು ಸರಕಾರಕ್ಕೆ recommend ಮಾಡಬಹುದಷ್ಟೇ. ಯಾವುದೇ ಶಾಸನ ಸಭೆ ಯಾ ಸರಕಾರ ಚಂದ್ರು ಅವರ ಸಂವಿಧಾನದ ಮೂಲಭೂತ ಹಕ್ಕುಗಳ ಆಶಯಕ್ಕೆ ವಿರುದ್ಧವಾಗಿರುವ recommendation ಒಪ್ಪುವುದು ಸಾಧ್ಯವೇ ಇಲ್ಲ - ಒಪ್ಪಿದರೂ ನ್ಯಾಯಾಲಯಗಳು ಅವನ್ನು ಒಪ್ಪುವುದು ಕಷ್ಟ.

ಅದು technicalityಯಾದರೆ, ಇನ್ನು economic impact ಬಗ್ಗೆ ಯೋಚಿಸಿದ್ದಾರೆಯೇ? ಈ ಎಲ್ಲಾ ಕಂಪೆನಿಗಳು ಬಾಗಿಲು ಮುಚ್ಚಿ ಹೋದರೆ ಅದರ ಹೊಡೆತ ಬೀಳುವುದು ಬಡ ಕನ್ನಡಿಗರಷ್ಟೇ. ಯಾಕೆಂದರೆ ಈ ಐಟಿ ಬಿಟಿಗಳು ಜರ್ಮನಿ, ಅಮೆರಿಕಾ ಎಂದು ಬುರ್ರೆಂದು ಹಾರಿಹೋಗುತ್ತಾರೆ. ಪ.ರಾಮಚಂದ್ರರಂತವರು ಕೊಲ್ಲಿ ರಾಷ್ಟ್ರಗಳಲ್ಲಿ ಹಾಯಾಗಿ ತಮ್ಮ ಜೀತದ ಕೆಲಸದಲ್ಲಿ ಮಗ್ನರಾಗುತ್ತಾರೆ. ಆದರೆ ಮುಚ್ಚಿದ ಕಂಪೆನಿಯ ಬಡ ಸೆಕ್ಯೂರಿಟಿ ಗಾರ್ಡುಗಳು, ಡ್ರೈವರುಗಳು, ಕ್ಯಾಂಟೀನ್ ಹುಡುಗರು ತಮ್ಮ "ಕನ್ನಡ ಹೊಟ್ಟೆ" ಮೇಲೆ ತಣ್ಣಗಿನ ಬಟ್ಟೆ ಹಾಕಿಕೊಳ್ಳಬೇಕಷ್ಟೇ.

ಭಾರತದ ಸಂವಿಧಾನ ಭಾರತೀಯ ಪ್ರಜೆಗಳೆಲ್ಲರಿಗೂ ದೇಶದೊಳಗೆ ಎಲ್ಲಿ ಬೇಕಾದರೂ ಹೋಗಿ ನೆಲೆಸುವ, ತಮ್ಮ ಭಾಷೆ ಸಂಸ್ಕೃತಿ ಆಚರಿಸುವ ಮೂಲಭೂತ ಹಕ್ಕು ನೀಡಿದೆ. ಇದನ್ನು ತಿಳಿದೂ ಅಥವಾ ತಿಳಿಯದೆಯೋ ಈ ಇಂಟರನೆಟ್ಟಿನ NRI, ಕನ್ನಡ ತಾಲಿಬಾನಿಗಳು ತಮ್ಮ ಮನೆಯಲ್ಲಿ, ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸುವ ಧೈರ್ಯ ತೋರಿಸಲಿ. ಪ್ರತಿ ವರ್ಷ ಡಜನುಗಟ್ಟಳ್ ಕನ್ನಡ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುತ್ತಿವೆ - ಮುಂದಿನ ಪೀಳಿಗೆಯೇ ಕನ್ನಡ ಎಂದರೆ ಏನು ಎಂದು ಪ್ರಶ್ನಿಸುವ ಪರಿಸ್ಥಿತಿ ಇಂದಿದೆ.

ಇಂತಹ ಮುಖ್ಯವಾದ ವಿಷಯಗಳನ್ನು ಚರ್ಚಿಸುವ ಬದಲು ಯಾರೋ ತನ್ನ ಖಾಸಗಿ ಫೇಸ್ ಬುಕ್ಕಿನಲ್ಲಿ ಏನೋ ಕಮೆಂಟು ಮಾಡಿದ ಎಂದು ಅವನಿಗೆ ಜೀವ ಬೆದರಿಕೆ, ಅವನ ಕಂಪೆನಿಯ HR ವಿಭಾಗಕ್ಕೆ ದೂರು ಕೊಟ್ಟು ಅವನನ್ನು ಕೆಲಸದಿಂದ ತೆಗೆದು ಹಾಕುವಂತೆ ಬೆದರಿಕೆ ಹಾಕುವ ತನಕ ಈ ವಿಷಯವನ್ನು ಎಳೆದಿರುವುದು ತಾಲಿಬಾನಿತನವಲ್ಲದೆ ಮತ್ತೇನು?

ಈ ಇಂಟರನೆಟ್ಟು ಗೂಂಡಾಗಿರಿ ನಾಯಕತ್ವ ವಹಿಸಿದ ಹೊಳೇನರಸೀಪುರ ಮಂಜುನಾಥ ತಿಮ್ಮಯ್ಯ - ಈ ವ್ಯಕ್ತಿಯೂ ಅರಬ್ ರಾಷ್ಟ್ರಗಳಲ್ಲಿ ಎಷ್ಟೋ ವರ್ಷ ದುಡಿದರೂ ಅರೇಬಿಕ್ ಕಲಿತ್ತಿದ್ದಾರೆಯೇ ಎಂದು ಕೇಳಬೇಕಾಗಿದೆ.

ಪೇಜ್ ಹಿಟ್ ದುರಾಶೆಯಲ್ಲಿ ಉದ್ರೇಕಕಾರಿ ಬರಹಗಳನ್ನು ಪ್ರಕಟಿಸಿ ಅಂತರ್ಜಾಲದ Mobಗಳನ್ನು ಛೂ ಬಿಡುವ "ಸಂಪಾದಕೀಯ" ಬ್ಲಾಗ್ ಮತ್ತಿತರ motive ಓಕೆ ಎನ್ನೋಣ - ಆದರೆ ಪ.ರಾಮಚಂದ್ರ, ಹೊಳೇನರಸೀಪುರ ಮಂಜುನಾಥರಂತಹ otherwise perfectly reasonable ಜನ, ತಾವು ಗಾಜಿನ ಮನೆಯಲ್ಲಿ ಕುಳಿತ್ತಿದ್ದರೂ ಇಂಟರನೆಟ್ಟಿನಲ್ಲಿ ಭಾಷಾಂಧರಾಗಿ ತಾಲಿಬಾನಿಗಳ ತರಹ ವರ್ತಿಸುವುದು ಕಂಡಾಗ ಬೇಸರವಾಗುತ್ತದೆ.

*************
ಅಂದ ಹಾಗೆ ಕ.ರಾ.ವೇ.ಯ ನಾರಾಯಣ "ರೋಲ್ ಕಾಲ್" ಗೌಡರು ಏಕ್ ದಂ ತಣ್ಣಗಾಗಿ ಹೋಗಿರುವುದನ್ನು ಗಮನಿಸಿದ್ದೀರೆಯೇ? ತನ್ನ ಸ್ವಜಾತಿ ಬಾಂಧವ ಅಶೋಕ ಗೃಹ ಮಂತ್ರಿಯಾದ ಕೂಡಲೇ ನಾರಾಯಣ ಗೌಡರು ಗಪ್ ಚುಪ್! ಒಂದು ಮೂಲದ ಪ್ರಕಾರ ಕರಾವೇಯ ಪುಂಡರ ಮೇಲಿರುವ ಕೇಸುಗಳನ್ನು ತೆಗೆಯುವ ಭರವಸೆ ಅಶೋಕರಿಂದ ದೊರೆತಿದೆಯಂತೆ. ಇನ್ನೊಂದು ಮೂಲದ ಪ್ರಕಾರ ತನ್ನ ಆಡಳಿತದಲ್ಲಿ ಕರಾವೇ ಯಾವುದೇ ಗೂಂಡಾಗಿರಿ ಮಾಡದೇ ಇರಲು ಅಶೋಕರಿಂದ ಗೌಡರಿಗೆ ಅದೆಷ್ಟೋ ಕಪ್ಪ ಕಾಣಿಕೆ ಸಂದಾಯವಾಗಿದೆಯಂತೆ. ಏನೇ ಇರಲಿ ಕರಾವೇ ಪುಂಡರ ದಾದಾಗಿರಿ, ಪುಂಡಾಟ ತಣ್ಣಗೆ ಆಗಿರುವುದಂತೂ ನಿಜ!

Thursday, September 9, 2010

ಅತ್ಯಾಚಾರ ಪ್ರಕರಣ ಆರೋಪಿ ವಿ.ಕ.ಪತ್ರಕರ್ತನ ಬಂಧನ ಪತ್ರಿಕಾ ಸ್ವಾತಂತ್ರಹರಣವೇ?


ಅತ್ಯಾಚಾರ ಪ್ರಕರಣ ಆರೋಪಿ ವಿ.ಕ.ಪತ್ರಕರ್ತನ ಬಂಧನ ಪತ್ರಿಕಾ ಸ್ವಾತಂತ್ರಹರಣವೇ?

ಈ ಬ್ಲಾಗ್ ಪೋಸ್ಟಿನ ಹೆಡ್ಡಿಂಗು rhetorical ಅಲ್ಲ. ಎರಡು ದಿನಗಳ ಹಿಂದೆ ಕುಮಟಾದಲ್ಲಿ ನಡೆದ ಘಟನೆಯ ಅವಲೋಕನ.

ಒಂದು ಘಟನೆಯನ್ನು - ಅದರಲ್ಲೂ ಪತ್ರಕರ್ತನೇ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಾಗ ಅದನ್ನು ತಮಗೆ ಬೇಕಾದಂತೆ ಹೇಗೆ ತಿರುಚಬಹುದೆನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ.



ಕುಮಟಾದ "ವಿಜಯ ಕರ್ನಾಟಕ"ದ ವರದಿಗಾರ ವಿ.ಡಿ.ಭಟ್ಟ ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಹಿಳೆ ಕಿರುಚಿದಾಗ ಜಮಾಯಿಸಿದ ಜನರಿಂದ ಹಿಗ್ಗಾಮುಗ್ಗಾ ಥಳಿಸಿಕೊಂಡು ಪೊಲೀಸ್ ಅತಿಥಿಯಾದನೆಂದು ಒಂದು ವರದಿ. ಅದೇ ಪ್ರಕರಣ "ವಿಜಯ ಕರ್ನಾಟಕ"ದಲ್ಲಿ ಪ್ರಕಟವಾದ ಧಾಟಿಯೇ ಬೇರೆ. ಅತ್ಯಾಚಾರ ಪ್ರಕರಣದ ಆರೋಪಿಯನ್ನು ಪೊಲೀಸರು ಥಳಿಸಿದರಂತೆ, ಅದು ಮಾಧ್ಯಮ ಸ್ವಾತಂತ್ರ್ಯದ ಹರಣವಂತೆ! ಉ.ಕ.ದ ಉಸ್ತುವಾರಿ ಸಚಿವರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲವೆಂಬ ಒಗ್ಗರಣೆ ಬೇರೆ. ಅಲ್ಲಾ ಸ್ವಾಮೀ, ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾದವರನ್ನೆಲ್ಲಾ ಉಸ್ತುವಾರಿ ಸಚಿವರು ವಿಚಾರಿಸುತ್ತಾ ಕುಳಿತುಕೊಳ್ಳಲು ಅವರಿಗೇನು ತಿಗಣೆ ಕಚ್ಚಿದೆಯಾ ಸ್ವಾಮೀ?

ಮಹಿಳಾ ಸ್ವಾತಂತ್ರ್ಯದ ಬಗ್ಗೆ ಕೊರೆಯುವ ವಿ.ಕ. ಈಗ ಪತ್ರಕರ್ತನ ವಿರುದ್ಧ ದೂರು ನೀಡಿದ ಬಡಪಾಯಿ ಮಹಿಳೆಯನ್ನೇ ವೇಶ್ಯೆಯೆಂದು ಹೀಯಾಳಿಸಿದಷ್ಟೇ ಅಲ್ಲ, ಮಹಿಳೆಯ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಿ ಮಾನಹರಣ ಮಾಡಿದೆ. ಒಂಥರಾ "ಮಹಿಳೆ provocative ಆಗಿ dress ಮಾಡಿಕೊಂಡರೆ ಅತ್ಯಾಚಾರಕ್ಕೆ ಆಹ್ವಾನಿಸಿದಂತೆ - ಅವಳದ್ದೇ ತಪ್ಪು" ಎಂಬ ತಾಲಿಬಾನಿಗಳ, ಕೆಲ Male Chauvinist Pigಗಳು ವಾದಿಸಿದಂತೆ. ಮಾಧ್ಯಮ ಸ್ವಾತಂತ್ರ್ಯವೆಂದರೆ ಪತ್ರಕರ್ತರು ಅತ್ಯಾಚಾರ ಮಾಡುವುದು OK ಎಂಬಲ್ಲಿಗೆ ಬಂದಿರುವುದು ನಮ್ಮ ದೌರ್ಭಾಗ್ಯವಷ್ಟೇ.

ಹಿಂದೆ ಯಾರೋ ಪೇದೆ ನೋಟೀಸ್ ಕೊಟ್ಟನೆಂದ ಮಾತ್ರಕ್ಕೆ ಮಾಧ್ಯಮ ಸ್ವಾತಂತ್ರ್ಯಹರಣವಾಯಿತೆಂದು ಗಣ್ಯರ ಹೆಸರಲ್ಲಿ ಏನೇನೋ ಪ್ರಕಟಿಸಿ ಸಿಕ್ಕಿ ಬಿದ್ದ (ಇಲ್ಲಿ ನೋಡಿ DGP ಅಜಯ ಸಿಂಹರ ಪತ್ರ) ವಿಜಯ ಕರ್ನಾಟಕದ Fake SMS, Fake Opinion generators ಇನ್ನೂ ಪಾಠ ಕಲಿತಂತಿಲ್ಲ.

ಅತ್ಯಾಚಾರಿ ಪ್ರಕರಣ ಆರೋಪಿ ವಿ.ಕ.ನ. ಪತ್ರಕರ್ತನ ಪರವಾಗಿ ರಾಜಕೀಯ ನಿರುದ್ಯೋಗಿಗಳಾದ ಆರ್.ವಿ.ದೇಶಪಾಂಡೆ, ಎಂ.ಸಿ.ನಾಣಯ್ಯ ಮತ್ತು ಹೊರಟ್ಟಿಗಳಂತಹವರಿಂದ ಹೇಳಿಕೆ ಕೊಡಿಸಿದೆ. ಶಿಕ್ಷಕರ ವರ್ಗಾವಣೆ ದಂಧೆಗೆ ತಡೆ ಹಾಕಿ ತಮ್ಮ ಖಮಾಯಿಗೆ ಕಲ್ಲು ಹಾಕಿದ ವಿಶ್ವೇಶ್ವರ ಹೆಗಡೆಯವರ ಮೇಲಿರುವ ಸಿಟ್ಟನ್ನು ಹೊರಟ್ಟಿ ಈಗ ಅತ್ಯಾಚಾರಿಯನ್ನು ಬೆಂಬಲಿಸಲು ಬಳಸಿಕೊಂಡದ್ದು ಹೊರಟ್ಟಿಯ ಸದ್ಯದ ಮಾನಸಿಕತೆಯನ್ನು ತೋರಿಸುತ್ತದೆಯೆಷ್ಟೇ.

ಇನ್ನು ಅತ್ಯಾಚಾರಿಯನ್ನು ಬಂಧಿಸಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿರುವುದರ ಸಾಕ್ಷಿಯೆಂದು ನಾಣಯ್ಯನವರು ಹೇಳಿದನ್ನು ನಂಬಲು ಜನರೇನು ಕಿವಿ ಮೇಲೆ ಹೂವಿಟ್ಟುಕೊಂಡಿದ್ದಾರ ಸ್ವಾಮೀ? ಸಂಜೆ ೭ ಘಂಟೆಯ ಮೇಲೆ ನಾಣಯ್ಯನವರಿಗೆ ಫೋನ್ ಮಾಡಿದರೆ ಹೇಗೆ ಬೇಕಾಂದಂತಹ ಅಭಿಪ್ರಾಯವನ್ನೂ ಪಡೆಯಬಹುದೆಂಬುದನ್ನು ಬೆಂಗಳೂರಿನ ಹಿರಿ ಮರಿ ಪತ್ರಕರ್ತರಿಗೂ ತಿಳಿದಿರುವ ವಿಷಯ - ಇಂತಹ ಕುಡುಕ ಹೇಳಿದನ್ನು box item ಮಾಡಿ ಹಾಕಿ ತನ್ನ ಅತ್ಯಾಚಾರಿ ವರದಿಗಾರನನ್ನು ಬೆಂಬಲಿಸುವ ಪರಿಸ್ಥಿತಿ ವಿ.ಕ. ಸಂಪಾದಕೀಯ ಮಂಡಳಿಗೆ ಬರಬಾರದಿತ್ತು.

ಪತ್ರಕರ್ತನೆಂದ ಮಾತ್ರಕ್ಕೆ ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಿಡುಗಡೆ ಮಾಡಬೇಕೆಂದು ವಿ.ಕ. ಅಭಿಪ್ರಾಯವೇ? ಅತ್ಯಾಚಾರಕ್ಕೂ ಮಾಧ್ಯಮ ಸ್ವಾತಂತ್ರ್ಯಕ್ಕಿರುವ ಸಂಬಂಧವೇನೆಂಬುದೇ ನನಗೆ ಅರ್ಥವಾಗುತ್ತಿಲ್ಲ. ಏನೆನ್ನುತ್ತೀರಿ?

Saturday, June 26, 2010

ವಿ.ಕ. ವರದಿಗೆ ಡಿ.ಜಿ.ಅಜಯ ಸಿಂಗ್ ಪ್ರತ್ಯುತ್ತರ ಪತ್ರದ ಪೂರ್ಣಪಾಠ ಪ್ರಕಟಿಸದ ವಿ.ಕ. ಸಂಪಾದಕೀಯ ಮಂಡಳಿಯ ಬೃಹಳ್ಳನೆಯರು! Irony - ವಿಕ ಬೆಂಬಲಕ್ಕೆ "ಅಂಡೆ ಪಿರ್ಕಿ" ಬಿವಿ ಸೀತಾರಾಮ

ವಿ.ಕ. ವರದಿಗೆ ಡಿ.ಜಿ.ಅಜಯ ಸಿಂಗ್ ಪ್ರತ್ಯುತ್ತರ-ಪತ್ರದ ಪೂರ್ಣಪಾಠ ಪ್ರಕಟಿಸದ ವಿ.ಕ. ಸಂಪಾದಕೀಯ ಮಂಡಳಿಯ ಬೃಹಳ್ಳನೆಯರು!

Irony - ವಿಕ ಬೆಂಬಲಕ್ಕೆ "ಅಂಡೆ ಪಿರ್ಕಿ" ಬಿವಿ ಸೀತಾರಾಮ ಮಾತ್ರ


ಕಳೆದ ಬ್ಲಾಗ್ ಪೋಸ್ಟಿನಲ್ಲಿ ವಿ.ಕ.ದ "ವರ್ಗಾವಣೆ ದಂಧೆ" fixer ಪತ್ರಕರ್ತರು ಖಡಕ್ ಅಧಿಕಾರಿ ಅಜಯ ಸಿಂಗರ ವಿರುದ್ಧ ಸಾರಿರುವ ಯುದ್ಧದ ಕುರಿತು ಬರೆದಿದ್ದೆ.

ಅನಾಮಧೇಯ ಪತ್ರದ ಹಿನ್ನೆಲೆಯಲ್ಲಿ ಯಾರೋ ಕಾರಖೂನ ಮಾಡಿದ ಪ್ರೊಸೀಜರಲ್ ತಪ್ಪಿಗಾಗಿ ಕರ್ನಾಟಕದ ಡಿ.ಜಿ./ಐಜಿಪಿಯ ವಿರುದ್ಧ ಯಕ:ಶ್ಚಿತ್ ಯುದ್ಧ ಸಾರಿ, "ಪತ್ರಿಕಾ ಸ್ವಾತಂತ್ರ್ಯ ಹರಣ" ಎಂದೆಲ್ಲಾ ಬಡಬಡಿಸಿದ ವಿ.ಕ.ದ ಸಂಪಾದಕೀಯ ಮಂಡಳಿಯ ಅಸಲೀತನವನ್ನು ಅಜಯ್ ಸಿಂಗರು ತಮ್ಮ ಪತ್ರದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಆದರೆ ಮೊದಲ ಪುಟದಲ್ಲಿ ಐಜಿಯನ್ನು ಹಿಗ್ಗಾ ಮುಗ್ಗಾ ಅವಹೇಳನ ಮಾಡಿದ ವಿ.ಕ.ದ ವರ್ಗಾವಣೆ ಪತ್ರಕರ್ತ ಏಜೆಂಟರ ಪೌರುಷ, ಐಜಿ ಅಜಯ ಸಿಂಗರ ಪತ್ರ ಪ್ರಕಟಿಸುವಲ್ಲಿ ಕಂಡು ಬಂದಿಲ್ಲ - ಎಲ್ಲೋ "ಹೆಸರು ಗೊತ್ತಿಲ್ಲ ಊರು ಬೇಡ"ದಂತಹ ಪತ್ರಗಳನ್ನು ಪ್ರಕಟಿಸುವ "ಓದುಗರ ಓಲೆ" ವಿಭಾಗದಲ್ಲಿ ಅಜಯ ಸಿಂಗರ ಪತ್ರವನ್ನು - ಅದೂ ಅರ್ಧ ಕತ್ತರಿಸಿ ಪ್ರಕಟಿಸಿ - ತಾವೆಂತಹ ಹೇಡಿಗಳು ಎಂದು ಭಟ್-ತ್ಯಾಗರಾಜ್-ರಾಘವೇಂದ್ರ ಭಟ್-ವಗೈರೆಗಳು ತೋರಿಸಿವೆ.

ಆದರೆ ಪ್ರಪಂಚ ಬದಲಾಗಿದೆ ಎಂದು ಈ ಕೂಪ ಮಂಡೂಕಗಳು ಅರಿತಂತಿಲ್ಲ! ಇಂಟರನೆಟ್ ಎಂಬ ಮಾಧ್ಯಮ ಎಷ್ಟು ಪ್ರಭಾವಶಾಲಿ ಎಂದು ಪೊಲೀಸರ ವರ್ಗಾವಣೆ ದಂಧೆಯಲ್ಲಿ ಮುಳುಗಿರುತ್ತಿದ್ದ ಈ ಪತ್ರಕರ್ತ ಶಿಖಾಮಣಿಗಳು ಅರಿತಂತಿಲ್ಲ. ಇಲ್ಲದಿದ್ದರೆ ಅಜಯ ಸಿಂಗರಂತಹ tech savvy ಸಜ್ಜನ ಅಧಿಕಾರಿಯ ವಿರುದ್ಧ ಹಿಗ್ಗಾಮುಗ್ಗಾ ಬರೆಯುತ್ತಿದ್ದರೆ?

ವಿ.ಕ. ಸಂಪಾದಕರಿಗೆ ಕಳಿಸಿದ ಪತ್ರದ ಮೂಲ ಪ್ರತಿಯನ್ನು ಕರ್ನಾಟಕ ಪೋಲಿಸ್ ವೆಬ್ ಸೈಟಿನಲ್ಲಿ ಕಾಣ ಬಹುದು (ಇಲ್ಲಿ ನೋಡಿ - http://media.ksp.diqtech.com/files/DO_to_VK.pdf)

ತಮ್ಮ ಪತ್ರವನ್ನು ಕತ್ತರಿಸಿದಲ್ಲದೆ, ಹೇಡಿಗಳಂತೆ ಎಲ್ಲೋ ಒಳಪುಟದಲ್ಲಿ ಪ್ರಕಟಿಸಿರುವ ಬಗ್ಗೆಯೂ ಅಜಯ ಸಿಂಗರು ಆಕ್ರೋಶ ಪಟ್ಟು follow-up ಪತ್ರ ಕಳಿಸಿದ್ದಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕಾಗಬಹುದು ಎಂದೂ ಎಚ್ಚರಿಸಿದ್ದಾರೆ.

ಅಜಯ ಸಿಂಹರ ಮೂಲ ಪತ್ರದಲ್ಲಿದ್ದ ಆದರೆ ವಿಕದಲ್ಲಿ ಕತ್ತರಿ ಪ್ರಯೋಗಕ್ಕೊಳಗಾದ ಒಂದು ಪ್ಯಾರಾಗ್ರಾಫ್ ಉಲ್ಲೇಖನೀಯ: "ತಪ್ಪು ಮಾಹಿತಿಯ ಆಧಾರದ ಮೇಲೆ ಕೆಲವು ಮುಖ್ಯ ವ್ಯಕ್ತಿಗಳ ಅಭಿಪ್ರಾಯವನ್ನು ಪಡೆದುಕೊಂಡಿರುತ್ತೀರಿ ಎಂದು ಸ್ಪಷ್ಟವಾಗಿರುತ್ತದೆ. ಅದರಲ್ಲಿ ಕೆಲವರು ನನ್ನನ್ನು ನಿನ್ನೆಯಿಂದ ದೂರವಾಣಿ ಮೂಲಕ ಸಂಪರ್ಕಿಸಿ ಅವರು ಹೇಳಿದ್ದು ಒಂದಾದರೆ, ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವುದೇ ಬೇರೆ ಎಂದು ತಿಳಿಸಿದ್ದಾರೆ. ಇದು ಪತ್ರಿಕೆಯ ಸಂಪಾದಕರಾಗಿ ನಿಮ್ಮ ಸ್ವಾತಂತ್ರ್ಯ? ನೀವು ನ್ಯಾಯಯುತ, ಆತ್ಮಸಾಕ್ಷಿಯುಳ್ಳ ಸಜ್ಜನ ವ್ಯಕ್ತಿಯಾಗಿದ್ದರೆ, ವಾಸ್ತವಾಂಶವನ್ನು ವಿವರಿಸಿ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಮತ್ತು ನಮ್ಮ ಕಚೇರಿಯಿಂದ ಕಳುಹಿಸಲಾದ ಪತ್ರಗಳನ್ನು ಪ್ರಕಟಿಸಿ ನಂತರ ಸಾರ್ವಜನಿಕ ಅಭಿಪ್ರಾಯವನ್ನು ಪಡೆಯಬಹುದಾಗಿತ್ತು"

ಹೋಗಿ ಆ ಮೂಲ ಪತ್ರವನ್ನು ನೋಡಿ, ನಿಜಕ್ಕೂ ಅಜಯ ಸಿಂಗರ ಪತ್ರ ಒಂದು Class Act - ವಿಕದ ಒಳಹೂರಣವನ್ನು ಚೆನ್ನಾಗಿ ಬಯಲಿಗೆಳೆದಿದ್ದಾರೆ ಮತ್ತು ವಿಶ್ವೇಶ್ವರ ಭಟ್ಟರ ಆತ್ಮ ಸಾಕ್ಷಿಯನ್ನೇ ಪ್ರಶ್ನಿಸಿದ್ದಾರೆ. "ಪತ್ರಿಕಾ ಸ್ವಾತಂತ್ರ್ಯವೆಂದರೆ ಕೊಲ್ಲಲು ಪರವಾನಿಗೆ ಅಲ್ಲ"ವೆಂಬ ಪದಗಳ ಹಿಂದಿರುವ ಅಜಯ ಸಿಂಹರ ನೋವನ್ನು ವಿಕದ ವರ್ಗಾವಣೆ ಏಜೆಂಟ್ ಗಡಣ, fixerಗಳು ಇನ್ನಾದರೂ ಅರ್ಥ ಮಾಡಿಕೊಳ್ಳಬಹುದೇ?

ವಿಕ ಪ್ರಮುಖ ವ್ಯಕ್ತಿಗಳ ಅಭಿಪ್ರಾಯವನ್ನು ತಿರುಚಿ ಬರೆದು ಡಿಜಿ ವಿರುದ್ಧ ಜನಾಭಿಪ್ರಾಯ ರೂಪಿಸಲು ಪ್ರಯತ್ನಿಸಿದರೆ, ವಿಶ್ವೇಶ್ವರ ಭಟ್ಟರ ಈ ಓರಾಟಕ್ಕೆ ಇತರ main stream ಪತ್ರಿಕೆಗಳಿಂದ, ಮಾಧ್ಯಮಗಳಿಂದ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.

ವಿಶ್ವೇಶ್ವರ ಭಟ್ಟರನ್ನು ಬೆಂಬಲಿಸಿದ ಏಕೈಕ ಸಂಪಾದಕ ಯಾರು ಗೊತ್ತೇ? ಮಂಗಳೂರಿನಲ್ಲಿ "ಕರಾವಳಿ ಅಲೆ"ಯೆಂಬ ಸೆಕ್ಸ್ ಪತ್ರಿಕೆ ನಡೆಸುತ್ತಿರುವ ಬಿ.ವಿ.ಸೀತಾರಾಮ್ ಮಾತ್ರ! ಎಂತಹ ವಿಪರ್ಯಾಸ ನೋಡಿ! ಯಾವ ಬಿವಿ ಸೀತಾರಾಂನ್ನು "ಅಂಡೆ ಪಿರ್ಕಿ"ಯೆಂದು ಬಣ್ಣಿಸಿದ್ದ ವಿಶ್ವೇಶ್ವರ ಭಟ್ಟರ ಬೆಂಬಲಕ್ಕೆ ಈಗ ನಿಂತಿರುವುದು ಅದೇ ಅಂಡೆ ಪಿರ್ಕಿ ಸೀತಾರಾಮ!

ವಿಕದ, ವಿಶ್ವೇಶ್ವರ ಭಟ್ಟರ ಅಧ:ಪತನಕ್ಕೆ ಬೇರೇನು ಸಾಕ್ಷಿ ಬೇಕು!??

Thursday, June 17, 2010

ವರ್ಗಾವಣೆ ದಂಧೆಗೆ ಸೊಪ್ಪು ಹಾಕದ ಡಿ.ಜಿ. ಅಜಯ್ ಸಿಂಗ್ ವಿರುದ್ಧ ವಿ.ಕ.ಪತ್ರಕರ್ತ ಗಡವರ ರಣಕಹಳೆ!

ವರ್ಗಾವಣೆ ದಂಧೆಗೆ ಸೊಪ್ಪು ಹಾಕದ ಡಿ.ಜಿ.ಅಜಯ್ ಸಿಂಗ್ ವಿರುದ್ಧ ವಿ.ಕ.ಪತ್ರಕರ್ತ ಗಡವರ ರಣಕಹಳೆ!
ವಿಜಯ ಕರ್ನಾಟಕದ ಸಬ್ ಎಡಿಟರುಗಳಿಂದ ಹಿಡಿದು, ಅಂಕಣಕಾರರು ಸಂಪಾದಕರೆಲ್ಲಾ ವರ್ಗಾವಣೆ ದಂಧೆಯ ಸೈಡು ಬ್ಯುಸಿನೆಸ್ ನಡೆಸುವುದು ವಿಧಾನಸೌಧ ಯಡ ತಾಕುವವರೆಲ್ಲರಿಗೂ ಗೊತ್ತಿರುವಂತ್ತದ್ದೇ.

ಯಾವಾಗ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತೋ ಆ ದಿನದಿಂದಲೇ "ಈ ಸರ್ಕಾರ ಅಧಿಕಾರಕ್ಕೆ ಬಂದದ್ದು ನಮ್ಮ ಪತ್ರಿಕೆಯಿಂದಾಗಿಯೇ" ಎಂದು ವಿಜಯ ಕರ್ನಾಟಕದ ಅಂಕಣಕಾರರು, ಸಂಪಾದಕರು ಹೇಳಿಕೊಂಡು ತಿರುಗುತ್ತಿದ್ದಾರೆ ಎಂಬುದು ಸುಳ್ಳಲ್ಲ.

ಪ್ರಭಾವೀ ಖಾತೆಗಳ ಸಚಿವರ ಅಟೆಂಡರುಗಳು, ಪಿ.ಎ.ಗಳೇ "ಸಾರ್ ವಿಕ ಭಟ್ಟರ ಹತ್ತಿರ ಫೋನು ಮಾಡಿಸಿ" ಎಂದೋ, "ತ್ಯಾಗರಾಜ್ ಶೋಭಕ್ಕರಿಗೆ ಕ್ಲೋಸು, ಅವರ ಬಳಿ ಸಾಹೇಬ್ರಿಗೆ ಫೋನ್ ಮಾಡಿಸಿ"ಯೆಂದೋ ವಿ.ಕ.ಪತ್ರಕರ್ತರ ಅಂಕಣಕಾರರ ಖಾಸಗೀ ಮೊಬೈಲ್ ನಂಬರ್ ನೀಡುತ್ತಾರೆ.

ಇನ್ನು ಡಿ.ಆರ್.ಅಶೋಕರಾಮ್ ಎಂಬ ವಿ.ಆರ್.ಎಲ್.ಕಂಪೆನಿಯ ಕಾರಖೂನ ಕಮ್ "ವಿ.ಕ.ಅಂಕಣಕಾರ" ಅತ್ತ ಎಂ.ಎಲ್.ಸಿ. ವಿಜಯಾನಂದರೆ ಹೆಸರಲ್ಲಿ, ಇತ್ತ ಬಳ್ಳಾರಿ ರೆಡ್ಡಿಗಳ ಏಜೆಂಟರಂತೆ ಇದ್ದ ಬಿದ್ದ ಸಚಿವರ ಮನೆಗಳಲ್ಲಿ ಕಚೇರಿಗಳಲ್ಲಿ ಕಂಡು ಬರುತ್ತಾರೆ.

ಶಾಲಾ ಶಿಕ್ಷಕರ ವರ್ಗಾಣೆಯಿಂದ ಹಿಡಿದು ಉನ್ನತ ಶಿಕ್ಷಕ ಇಲಾಖೆ (ಹೇಗೂ ಲಿಂಬಾವಳಿ "ನಮ್ಮ ಎಬಿವಿಪಿ ಹುಡುಗ" ನೋಡಿ), ಶೋಭಕ್ಕ ಇದ್ದಾಗ ಪಂಚಾಯತಿ ಇಲಾಖೆ, ಪಶು ವೈದ್ಯಕೀಯ ಇಲಾಖೆ, ಸರಕಾರೀ ಮೆಡಿಕಲ್ ಕಾಲೀಜುಗಳ ಗುಮಾಸ್ತರಿಂದ ಹಿಡಿದು ಪೋಲಿಸ್ ಇಲಾಖೆಯ ವರ್ಗಾವಣೆಯಲ್ಲೂ ವಿ.ಕ.ದ ಪತ್ರಕರ್ತ ಮಿತ್ರರು ಕೈಯಾಡಿಸುವುದು ಖಮಾಯಿಸುವುದು ವಿಧಾನಮಂಡಲ ಬೀಟ್ ನ ಎಲ್ಲರಿಗೂ ತಿಳಿದಿರುವ ಸಂಗತಿ.
ಆದರೆ ಯಾವಾಗ ಸುಪ್ರೀಂ ಕೋರ್ಟ್ ಆದೇಶದಂತೆ ಸರಕಾರ ಪೋಲೀಸ್ ವರ್ಗಾವಣೆ ಬೋರ್ಡ್ ಸ್ಥಾಪಿಸಿತೋ, ಅಂದಿನಿಂದ ಈ ವಿ.ಕ. ಪತ್ರಕರ್ತ coterie ಗೆ ಪೋಲಿಸ್ ಇಲಾಖೆಯ ವರ್ಗಾವಣೆ ಕೆಲಸವಿಲ್ಲದಂತಾಗಿ ಹೋಗಿ ಮೈ ಪರೆಚುಕೊಳ್ಳುತ್ತಿದ್ದಾರೆ.

ಇದರ ಪರಿಣಾಮವೇ ಇದ್ದಕ್ಕಿದ್ದಂತೆ ಯಾವುದೋ ಅನಾಮಧೇಯ ಪತ್ರದ ಜಾಡು ಹಿಡಿದು ಪೇದೆ ವಿ.ಕ.ದ ಕಚೇರಿಗೆ ಹೋದದ್ದನ್ನೇ ನೆಪ ಹಿಡಿದು ಡಿ.ಜಿ. ಅಜಯ್ ಸಿಂಗರ ವಿರುದ್ಧ ಕೀಳಭಿರುಚಿಯ ವರದಿಗಳನ್ನು ವಿಜಯ ಕರ್ನಾಟಕ ಪ್ರಕಟಿಸಿ ನಮ್ಮ ಕಾನೂನು ಪಾಲಕರನ್ನು ಕುಗ್ಗಿಸುವ ಕೆಲಸ ಮಾಡುತ್ತಿರುವುದು ಖಂಡನೀಯ.

ಅದೂ ನಕ್ಸಲರಂತಹ ಹೇಡಿಗಳು ಪೋಲಿಸರ ರುಂಡ ಚೆಂಡಾಡುತ್ತಿರುವಾಗ ಪೋಲಿಸರ ಹಿಂದಿರುವ ಬದಲು ಕೇವಲ ತಮ್ಮ ವರ್ಗಾವಣೆ ಶಿಫಾರಸುಗಳಿಗೆ ಸೊಪ್ಪು ಹಾಕಿಲ್ಲವೆಂದು ಅಜಯ್ ಸಿಂಗರಂತಹ ಪ್ರಾಮಾಣಿಕ ಅಧಿಕಾರಿಗಳನ್ನು ಹೀಯಾಳಿಸಿ ಬರೆಯುವುದು "ವಿಜಯ ಕರ್ನಾಟಕ" ಸಂಪಾದಕೀಯ ಮಂಡಳಿಗೆ "ಶೋಭೆ" ತರುವ ವಿಷಯವಲ್ಲ.

ಕರ್ನಾಟಕ ಇತ್ತೀಚಿನ ದಿನಗಳಲ್ಲಿ ಕಂಡ ಸಭ್ಯ ಅಧಿಕಾರಿಗಳಲ್ಲಿ ಅಜಯ್ ಸಿಂಗ್ ಒಬ್ಬರು. ವರ್ಗಾವಣೆ ದಂಧೆಯನ್ನು ಯಕ:ಶ್ಚಿತ್ ನಿಲ್ಲಿಸಿರುವ ಅಜಯ್ ಸಿಂಗ್ CM ಕಚೇರಿಯಿಂದ ಬಂದ ಶಿಫಾರಸುಗಳನ್ನೇ ಕಡೆಗಣಿಸಿರುವಾಗ ವಿಜಯ ಕರ್ನಾಟಕದ ದಲ್ಲಾಳಿ ಪತ್ರಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಸರಿಯಾಗಿಯೇ ಇದೆ.

ತಾವೇ ಸೂಪರ್ ಮಿನಿಸ್ಟರ್, ತಾವೇ ಸೂಪರ್ ಗವರ್ಮೆಂಟು ಎಂದು ಬೀಗುತ್ತಿದ್ದ ವಿ.ಕ.ದ ಭಟ್ಟರು, ತ್ಯಾಗರಾಜ್ ಅಶೋಕರಾಮ್ ರಂತಹ ದಲ್ಲಾಳಿಗಳು ಅಜಯ್ ಸಿಂಗರಂತಹ ಅಧಿಕಾರಿಗಳ ವಿರುದ್ಧ ಏನೇನೋ ದಿನಗಟ್ಟಳೆ ಬರೆದರೆ ಜನರು ನಂಬುತ್ತಾರೆ ಎಂಬ ಭ್ರಮೆಯಿಂದ ಹೊರಬಂದು ಆತ್ಮಾವಲೋಖನ ಮಾಡಿಕೊಳ್ಳಬೇಕಾಗಿದೆ.

**************
ಕೊನೆ ಮಾತು: ಶೋಭಕ್ಕನನ್ನು ಹಿಗ್ಗಾ ಮುಗ್ಗ ಹೊಗಳುವ ತ್ಯಾಗರಾಜ್, ಅಶೋಕರಾಮರಂತಹ ವರ್ಗಾವಣೆ ದಲ್ಲಾಳಿಗಳಿಗೊಂದು ಪ್ರಶ್ನೆ - ಶೋಭಕ್ಕ ಇತ್ತೀಚೆಗೆ ಮಾನಸ ಸರೋವರಕ್ಕೆ ಹೋಗಿ ಬಂದರು ತಾನೆ? ಅತ್ತ ಬಡ ಯಾತ್ರಿಕರು ಬಸ್ಸಿನಲ್ಲಿ, ಜೀಪಿನಲ್ಲಿ ಒದ್ದಾಡಿಕೊಂಡು ಮಾನಸ ಸರೋವರಕ್ಕೆ ಹೋದರೆ, ಶೋಭಕ್ಕ ಹೆಲಿಕಾಪ್ಟರಿನಲ್ಲಿ ಬುರ್ರೆಂದು ನೇಪಾಳ ಚೀನಾ ಹೋಗಲು ಆದ ಖರ್ಚು ಎಷ್ಟು ಎಂದು ಕೇಳುವ ಧೈರ್ಯ ತಮಗಿದೆಯೇ? ಯಾವುದೇ ಆದಾಯವಿಲ್ಲದೇ ಯಕ:ಶ್ಚಿತ್ ಎಂ.ಎಲ್.ಎ. ಆಗಿರುವ ಶೋಭಕ್ಕನಿಗೆ ಹೀಗೆ ಕೋಟ್ಯಾಂತರ ರೂಪಾಯಿ ಸಿಕ್ಕಿದ್ದು ಎಲ್ಲಿಂದ?

ಯಾವುದೋ ಹಳಸಲು "ಸುದ್ದಿಮನೆ" ಬದಲು ಅಥವಾ "ಹಾಲಪ್ಪ tape" ಎಂಬ political manipulatative ಗೆ ಬಲಿಬಿದ್ದು "ನಮ್ಮದು ತನಿಖಾ ಪತ್ರಿಕೋದ್ಯಮ" ಎಂದು ಕೊಚ್ಚಿಕೊಳ್ಳುವ ಬದಲು, ಒಂದಿನಿತೂ ಆದಾಯವಿಲ್ಲದೆಯೂ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮಾನಸ ಸರೋವರಕ್ಕೆ ಬುರ್ರೆಂದು ಹಾರಿಹೋದ ಶೋಭಕ್ಕರ finance ಮಾಡಿದ್ದು ಯಾರೆಂದು ಹುಡುಕಿ ನಿಜವಾದ ಪತ್ರಿಕೋದ್ಯಮ ಏನೆಂದು ತೀರಿಸುವ ತಾಖತ್ತು "ವಿಜಯ ಕರ್ನಾಟಕ"ದ ಪತ್ರಕರ್ತರೆಂಬ ವರ್ಗಾವಣೆ ಏಜೆಂಟರುಗಳಿಗಿದೆಯೇ?
&&&&&